ಸಾರಾಂಶ
ಕೊರಟಗೆರೆ ತಾಲೂಕಿನಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಬಫರ್ ಡ್ಯಾಂ ನ್ನು ಹಳೆಯ ನಕ್ಷೆಯಂತೆ ಬೈರಗೊಂಡ್ಲು ಬಳಿಯೇ ನಿರ್ಮಿಸಿ, ಅಲ್ಲಿನ ರೈತರಿಗೆ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರವನ್ನು ನೀಡಿ, ಎಲ್ಲರಿಗೂ ಪುನರ್ ವಸತಿ ಕಲ್ಪಿಸಿವುದು ಸರ್ಕಾರದ ಕರ್ತವ್ಯವಾಗಿದ್ದು ಕೂಡಲೆ ಬಫರ್ ಡ್ಯಾಂ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ತಾಲೂಕಿನಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಬಫರ್ ಡ್ಯಾಂ ನ್ನು ಹಳೆಯ ನಕ್ಷೆಯಂತೆ ಬೈರಗೊಂಡ್ಲು ಬಳಿಯೇ ನಿರ್ಮಿಸಿ, ಅಲ್ಲಿನ ರೈತರಿಗೆ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರವನ್ನು ನೀಡಿ, ಎಲ್ಲರಿಗೂ ಪುನರ್ ವಸತಿ ಕಲ್ಪಿಸಿವುದು ಸರ್ಕಾರದ ಕರ್ತವ್ಯವಾಗಿದ್ದು ಕೂಡಲೆ ಬಫರ್ ಡ್ಯಾಂ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ೨೦೧೩ ರಲ್ಲಿ ಸಿದ್ದರಾಮಯ್ಯ ಸರ್ಕಾರವು ಎತ್ತಿನಹೊಳೆ ಯೋಜನೆಯನ್ನು ಪ್ರಾರಂಭಿಸಿ ೫ ವರ್ಷಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿತ್ತು, ಆದರೆ ಇಲ್ಲಿಯವೆರೆಗೂ ಭೂ ಸ್ವಾದೀನ ಪ್ರಕ್ರಿಯೆಯಾಗಲಿ, ರೈತರಿಗೆ ಪರಿಹಾರ ನೀಡುವುದಾಗಲಿ, ಪೈಪ್ ಲೈನ್ ಗಳ ಕಾಮಗಾರಿಯಾಗಲಿ ಸರಿಯಾಗಿ ಆಗಿಲ್ಲ, ಜೊತೆಗೆ ಕೊರಟಗೆರೆ ತಾಲೂಕಿನ ೧೧೦ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಡಿಪಿಆರ್ ಆಗಲಿ ಆಥವಾ ಕಾಮಗಾರಿಯಾಗಲಿ ಆಗಿಲ್ಲ, ಇದರ ಬಗ್ಗೆ ಇಲಾಖೆ ಮತ್ತು ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ತಿಳಿಸಿದರು.ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿನಲ್ಲಿ ಬೈರಗೊಂಡ್ಲು ಗ್ರಾಮದಲ್ಲಿ ಬಫರ್ ಡ್ಯಾಂ ಅನ್ನು ನಿರ್ಮಿಸಲು ನೀಲಿ ನಕ್ಷೆ ತಯಾರಿಸಿ ಕಾರ್ಯರೊಪಕ್ಕೆ ತರಲಾಯಿತು, ಆದರೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಹಿನ್ನೆಲೆಯಲ್ಲಿ ಕೈಬಿಡಲಾಯಿತು, ಆದರೆ ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಾದ ಡಿ.ಕೆ,ಶಿವಕುಮಾರ್ ಮತ್ತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರು ಮತ್ತೆ ಈ ಭಾಗದಲ್ಲಿ ಬಫರ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಬಯಲು ಸೀಮೆಯ ಈ ಭಾಗದ ಲಕ್ಷಾಂತರ ಜನರಿಗೆ ಸಂತಸ ಮತ್ತು ಜೀವ ನೀಡಿದಂತ್ತಾಗಿದೆ, ಎಂದರು.ತಾಲೂಕಿನ ಲಕ್ಷಾಂತರ ಕೊಳವೆ ಬಾವಿಗಳು ಪುನರ್ ಜೀವ ಪಡೆಯುತ್ತವೆ, ಆದರೆ ಈ ಡ್ಯಾಂ ನಿರ್ಮಾಣದಿಂದ ಭೂಮಿ ಮತ್ತು ವಸತಿ ಕಳೆದುಕೊಳ್ಳುವ ರೈತರಿಗೆ ಪುನರ್ ವಸತಿ ನೀಡಿ ಅವರಿಗೆ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರವನ್ನು ನೀಡಬೇಕು, ರೈತರಿಗೆ ನ್ಯಾಯ ಒದಗಿಸುವುದು ಮತು ಬಫರ್ ಡ್ಯಾಂ ಅನ್ನು ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಎರಡನ್ನು ಮಾಡಬೇಕೆಂದು ಒತ್ತಾಯಿಸಿದರು.ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ ಸರ್ಕಾರವು ರೈತರು ಆತಂಕಗೊಳ್ಳುತ್ತಿರುವ ವಕ್ತ್ ಬೋರ್ಡ್ ವಿವಾದವನ್ನು ಬಗೆ ಹರಿಸಬೇಕು ಹಾಗೂ ಬಡವರು ಆಂತಕಗೊಂಡಿರುವ ರದ್ದಾಗಿರುವ ಪಡಿತರವನ್ನು ಮತ್ತೆ ನೀಡಬೇಕು, ರಾಜ್ಯದಲ್ಲಿ ವಕ್ತ್ ಬೋರ್ಡ್ ನಿಂದ ರೈತರ ಭೂಮಿ ಎಲ್ಲಿ ಕಸಿದು ಹೋಗುವುದೆಂದು ರೈತರು ಹಗಲಿರುಳು ಭಯದಲ್ಲಿ ಇದ್ದಾರೆ, ಅದೇ ರೀತಿ ರದ್ದಾಗಿರುವ ಬಿಪಿಎಲ್ ಕಾರ್ಡ್ ಗಳು ವಾಪಸ್ ನೀಡದಿದ್ದರೆ ನಮ್ಮ ಗತಿ ಏನು ಎಂದು ಬಡವರು ಹಗಲಿರುಳು ಚಿಂತಿಸುತ್ತಿದ್ದಾರೆ ಸರ್ಕಾರವು ಕೂಡಲೇ ಈ ಎರಡನ್ನು ಬಗೆಹರಿಸಿ ರೈತರು ಮತ್ತು ಬಡಜನತೆಗೆ ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ಲೋಕೇಶ್, ವಸಂತಕುಮಾರ್, ಕೆಂಪರಾಜು, ರಾಮಚಂದ್ರಯ್ಯ, ಈರಣ್ಣ, ಲಕ್ಷ್ಮೀನಾಯ್ಕ, ಕೃಷ್ಣನಾಯ್ಕ್, ಪ್ರಸನ್ನ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.