ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅಕ್ರಮ ತಡೆಗೆ ರೈತ ಸಂಘ ಒತ್ತಾಯ

| Published : May 24 2024, 12:46 AM IST

ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅಕ್ರಮ ತಡೆಗೆ ರೈತ ಸಂಘ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಯ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.

ನಿಗದಿದ ಬೆಲೆಯಲ್ಲಿ ಖರೀದಿಸದ ನಾಫೆಡ್ ಅಧಿಕಾರಿ । ದಲ್ಲಾಳಿಗಳಿಂದ ಲಂಚ ಸ್ವೀಕಾರ: ಗುರುಶಾಂತಪ್ಪ ಆರೋಪ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಜ್ಜಂಪುರ ಕೊಬ್ಬರಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಯ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದು ತಂದ ಕೊಬ್ಬರಿಯನ್ನು ಸರ್ಕಾರ ನಿಗದಿಪಡಿಸಿರುವ ಬೆಲೆಯಲ್ಲಿ ಎಪಿಎಂಸಿ ನಾಫೆಡ್ ಅಧಿಕಾರಿ ಕೊಂಡುಕೊಳ್ಳದೆ ದಲ್ಲಾಳಿಗಳು ನೀಡಿದ ಲಂಚ ಪಡೆದು ಅವರು ತಂದಿರುವ ಕೊಬ್ಬರಿಯನ್ನು ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯ ಅಜ್ಜಂಪುರ ತಾಲೂಕಿನ ರೈತರು ಬೆಳೆದ ಕೊಬ್ಬರಿಯನ್ನು ನಾಫೆಡ್ ಮುಖಾಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಇದಕ್ಕಾಗಿಯೇ ಮಾರುಕಟ್ಟೆ ಸಮಿತಿ ಗೋಡನ್‌ ವ್ಯವಸ್ಥೆ ಮಾಡಿದೆ. ಆದರೆ ನಾಫೆಡ್‌ನಿಂದ ನಿಯೋಜನೆಗೊಂಡಿರುವ ಅಧಿಕಾರಿ ರೈತರಿಗೆ ಕಂಟಕವಾಗಿದ್ದಾರೆ ಎಂದು ದೂರಿದರು.

ಪ್ರತಿ ಕ್ವಿಂಟಾಲ್ ಕೊಬ್ಬರಿ ಕೊಳ್ಳಲು 200 ರು. ನಂತೆ 15 ಕ್ವಿಂಟಾಲ್‌ಗೆ 3,000 ರು.ಗಳನ್ನು ಕೊಡಬೇಕು. ಇಲ್ಲದಿದ್ದರೆ ಗುಣಮಟ್ಟದ ಕಾರಣ ಹೇಳಿ ತಿರಸ್ಕರಿಸಲಾಗುತ್ತಿದೆ. ಪ್ರತಿದಿನ 35 ರಿಂದ 40 ಗಾಡಿಗಳು ಸರದಿಯಲ್ಲಿ ಇದ್ದರು ಕೇವಲ 8 ರಿಂದ 10 ಗಾಡಿಯಲ್ಲಿ ಖರೀದಿ ಮಾಡಲಾಗುತ್ತದೆ ಎಂದರು.

ಈಗಾಗಲೇ 7-8 ದಿನಗಳಿಂದ ರೈತರು ಸರದಿಯಲ್ಲಿ ಕಾಯುತ್ತಿದ್ದಾರೆ. ಇಲ್ಲಿ ರೈತರಿಗೆ ಉಳಿದುಕೊಳ್ಳಲಿಕ್ಕಾಗಲಿ, ಗಾಡಿಗಳಿಗೆ ರಕ್ಷಣೆಗಾಗಿ ವ್ಯವಸ್ಥೆ ಇಲ್ಲ. ಬೇರೆ ಎಪಿಎಂಸಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಅಂತಹ ಯಾವುದೇ ಸವಲತ್ತು ಅಜ್ಜಂಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಲ್ಲ ಎಂದು ಹೇಳಿದರು.

ಇಲ್ಲಿ 2 ಗೋಡಾನ್‌ ಮಾಡಿಕೊಳ್ಳಲಾಗಿದ್ದು ರೈತರ ಉತ್ಪನ್ನಗಳನ್ನು ಒಂದರಲ್ಲಿ ಖರೀದಿ ಮಾಡಲಾಗುತ್ತದೆ, ಮತ್ತೊಂದು ಗೋಡಾನ್‌ನಲ್ಲಿ ದಲ್ಲಾಳಿಗಳು ಹಾಗೂ ಹಣ ಜಾಸ್ತಿ ಕೊಟ್ಟವರ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಕೊಳ್ಳಲಾಗುತ್ತದೆ ಎಂದು ಆರೋಪಿಸಿದರು.

ಪ್ರಶ್ನೆ ಮಾಡಿದರೆ ವಹಿವಾಟು ನಿಲ್ಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಅಧಿಕಾರಿ ಯಾವಾಗಲೂ ಅಮಲಿನಲ್ಲಿ ತೇಲಾಡುತ್ತಿದ್ದು ಕಚೇರಿಯಲ್ಲಿ ಇರುವುದೇ ಕಡಿಮೆಯಾಗಿದ್ದು ಈ ಅಧಿಕಾರಿಯನ್ನು ಬೇರೆಡೆಗೆ ವರ್ಗಾಹಿಸಲು ಜಿಲ್ಲಾಧಿಕಾರಿ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಮುಖಂಡರಾದ ಆನಂದ್, ಮಂಜುನಾಥ್, ಬಸವರಾಜ್, ಶಿವಣ್ಣ, ವಿಜಯಕುಮಾರ್ ಹಾಗೂ ಕೊಬ್ಬರಿ ಬೆಳೆಗಾರ ಮಲ್ಲಪ್ಪ ಇದ್ದರು.

ಪೋಟೋ ಫೈಲ್‌ ನೇಮ್‌ 23 ಕೆಸಿಕೆಎಂ 4