ರಸ್ತೆ ಅಭಿವೃದ್ಧಿಗೆ ರೈತ ಸಂಘದಿಂದ ಭಿಕ್ಷೆ ಬೇಡಿ ಚಳುವಳಿ

| Published : Nov 25 2025, 02:00 AM IST

ಸಾರಾಂಶ

ತಾಲೂಕಿನ ದೊಡ್ಡಿಂದುವಾಡಿಯಲ್ಲಿ ಕೆಲ ಗ್ರಾಮಾಂತರ ಭಾಗದ ರಸ್ತೆ ಅವ್ಯವಸ್ಥೆ ಖಂಡಿಸಿ ಗುಂಡಿ ಮುಚ್ಚಲು ಸಲುವಾಗಿ ರೈತ ಮುಖಂಡರು ಸೋಮವಾರ ಭಿಕ್ಷೆ ಬೇಡುವ ಮೂಲಕ ಕೆಲಕಾಲ ಅಣಕು ಚಳುವಳಿ ನಡೆಸಿದರು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ತಾಲೂಕಿನ ದೊಡ್ಡಿಂದುವಾಡಿಯಲ್ಲಿ ಕೆಲ ಗ್ರಾಮಾಂತರ ಭಾಗದ ರಸ್ತೆ ಅವ್ಯವಸ್ಥೆ ಖಂಡಿಸಿ ಗುಂಡಿ ಮುಚ್ಚಲು ಸಲುವಾಗಿ ರೈತ ಮುಖಂಡರು ಸೋಮವಾರ ಭಿಕ್ಷೆ ಬೇಡುವ ಮೂಲಕ ಕೆಲಕಾಲ ಅಣಕು ಚಳುವಳಿ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ದೊಡ್ಡಿಂದುವಾಡಿ ಹಾಗೂ ಸಿಂಗನಲ್ಲೂರು ಶಾಖೆ ರೈತರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಾಗೂ ಗುಂಡಾಲ್ ಜಲಾಶಯದ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳ, ಕೊಳ್ಳಗಳಿಂದ ಕೂಡಿದ್ದು ಅದನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ, ಈ ಸಂಬಂಧಗಮನಹರಿಸಬೇಕಾದ ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗ ಮೌನ ತಾಳಿದ್ದು ವ್ಯವಸ್ಥೆ ವಿರುದ್ದ ವಿಧಿ ಇಲ್ಲದ ಭಿಕ್ಷೆ ಎತ್ತಿ ಗುಂಡಿ ಮುಚ್ಚುವ ಸಲುವಾಗಿ ನಾವು

ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

ತಾಲೂಕಿನ ಕಾಮಗೆರೆ, ಸಿಂಗನಲ್ಲೂರು ಹಾಗೂ ದೊಡ್ಡಿಂದುವಾಡಿ ಗ್ರಾಮಗಳಲ್ಲಿ ಭಿಕ್ಷೆ ಚಳುವಳಿ ನಡೆಸಿದ ರೈತ ಮುಖಂಡರು ಬಳಿಕ ದೊಡ್ಡಿಂದುವಾಡಿ ಗ್ರಾಮದ ವೃತ್ತದ ಬಳಿ ಪ್ರತಿಭಟನೆ ನಡೆಸಿ ಸ್ಥಳೀಯ ವ್ಯವಸ್ಥೆ, ಸರ್ಕಾರ ಹಾಗೂ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಜಿಪಂ ಉಪವಿಭಾಗ ಎಇಇ ಕುಮಾರ್, ಎಂಜಿನಿಯರ್ ಮಂಜು, ಕಬಿನಿ ಇಲಾಖೆ ಎಇ ರಾಮಕೃಷ್ಣ, ಪಿಡಿಒ ಮರಿಸ್ವಾಮಿ ಭೇಟಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ, ರಸ್ತೆ ದುರಸ್ತಿಗೆ ಕ್ರಮವಹಿಸುವ ಭರವಸೆ ನೀಡಿದರು.

ರೈತರು ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ ₹3555 ಅನ್ನು ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಹಾಗೂ ಜಿಪಂ

ಇಲಾಖೆಗೆ ತಲಾ ₹1,185ನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಲು ರೈತರು

ಮುಂದಾದರಾದರೂ ಅಧಿಕಾರಿಗಳು ಸ್ವೀಕರಿಸಿದ ಹಿನ್ನೆಲೆ ರೈತರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅಧಿಕಾರಿಗಳು ನೀವು ಸರ್ಕಾರದ ಖಾತೆಗೆ ಹಣ ಜಮೆ ಮಾಡಿ ನಾವು ಸ್ವೀಕರಿಸಲ್ಲ, ನಿಮ್ಮ ಮನವಿ ಸ್ವೀಕರಿಸಿ ರಸ್ತೆ ಅಭಿವೃದ್ದಿಗೆ ಮುಂದಾಗುತ್ತೇವೆ. ಹಣ ಮಾತ್ರ ನಮಗೆ ಬೇಡ ಎಂದು ಹೇಳುತ್ತಿದ್ದಂತೆ ರೈತರು ಹಣ ಸ್ವೀಕರಿಸಲೆಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಮಧುವನಹಳ್ಳಿ ಬಸವರಾಜು, ಅಣಗಳ್ಳಿ ಗ್ರಾಮಘಟಕ ಕೀರ್ತಿ, ಲಾರೆನ್ಸ್, ತಾಲೂಕು ಯುವ ಘಟಕ ಅಧ್ಯಕ್ಷ ವಾಸು, ದೊಡ್ಡಿಂದುವಾಡಿ ಗ್ರಾಮ ಘಟಕ ಅಧ್ಯಕ್ಷ ವಸಂತ ಕುಮಾರ್, ಉಪಾಧ್ಯಕ್ಷ ಸುರೇಂದ್ರ, ಮನುಗೌಡ, ರವಿ, ನಾಗೇಂದ್ರ, ಶಿವರಾಮ್, ಗೋವಿಂದರಾಜು, ನಂದೀಶ್, ಅಬ್ದುಲ್ ಖಾದರ್, ಸಿಂಗನಲ್ಲೂರು ಗ್ರಾಮಘಟಕ ಅಧ್ಯಕ್ಷ ಬೆಟ್ಟೇಗೌಡ, .ರಾಜ್, ಜಾನ್ ಜೋಸೆಫ್ ಇನ್ನಿತರಿದ್ದರು