ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರು ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಹಸಿರು ಟವಲ್ ರೈತರ ಸಂಕೇತ. ಅದು ರೈತ ಸಂಘದ ಸ್ವತ್ತಲ್ಲ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಜ್ಯದ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ರೈತಸಂಘದ ಮುಖಂಡರು ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜಿಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಎಚ್.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಸಿಎಂ ಆಗಿದ್ದ ಎಚ್ಡಿಕೆ ಅವರು ತಮ್ಮ ಆಡಳಿತಾವಧಿಯಲ್ಲಿ ರೈತರ ಸಾಲಮನ್ನಾ, ಸಾರಾಯಿ, ಲಾಟರಿ ನಿಷೇಧ, ಗ್ರಾಮ ವಾಸ್ತವ್ಯದ ಮುಖಾಂತರ ರಾಜ್ಯದ ಜನರ ಮನ ಗೆದ್ದಿದ್ದಾರೆ. ತಾಲೂಕಿನ ಬಳಘಟ್ಟ ಗ್ರಾಮದ ಕಾರ್ಯಕ್ರಮದಲ್ಲಿ ಎಚ್‌ಡಿಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಬಗ್ಗೆ ತಮ್ಮ ಅಭಿಪ್ರಾಯದ ಜೊತೆಗೆ ಕಳೆದ ಚುನಾವಣೆ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪು ಹುಡುಕುವ ಅಗತ್ಯತೆ ಇಲ್ಲ ಎಂದರು.

ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡರು ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಹಸಿರು ಟವಲ್ ರೈತರ ಸಂಕೇತ. ಅದು ರೈತ ಸಂಘದ ಸ್ವತ್ತಲ್ಲ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸೋದರ ಸಂಬಂಧಿ ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಕೈಯಾಡಿಸುತ್ತಿದ್ದಾರೆ. ಈ ವಿಚಾರ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ. ಈ ಬಗ್ಗೆ ರೈತಸಂಘದವರು ಸ್ಪಷ್ಟನೆ ನೀಡಲಿ ಎಂದರು.

ಅರಳಕುಪ್ಪೆ ಗ್ರಾಮದ ರೈತ ಮಹಿಳೆ ಸುಜಾತ ಮಾತನಾಡಿ, ನಮ್ಮ ಮನೆಗೆ ಬೆಂಕಿ ತಗುಲಿ ಸುಟ್ಟು ಹೋದಾಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿ ರೈತಸಂಘದ ಎಲ್ಲಾ ಮುಖಂಡರಿಗೂ ಮನವಿ ಸಲ್ಲಿಸಿ ಪರಿಹಾರ ಮತ್ತು ಸಹಾಯಕ್ಕೆ ಅಂಗಲಾಚಿದರು ಯಾರೊಬ್ಬರು ಸಹಾಯಕ್ಕೆ ಧಾವಿಸಲಿಲ್ಲ. ನನ್ನ ಗಂಡ ರೈತಸಂಘದಲ್ಲಿ ಕೆಂಪೂಗೌಡರ ಜೊತೆಯಲ್ಲಿಯೇ ಇದ್ದರೂ ನೆರವಿಗೆ ಬಂದಿಲ್ಲ. ಆದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಮ್ಮ ಕಷ್ಟಕ್ಕೆ ಮರುಗಿ 5 ಲಕ್ಷ ರು.ಸಹಾಯ ಮಾಡಿದ್ದಾರೆ. ಇದು ದೊಡ್ಡವರ ಗುಣ ಎಂದರು.

ಜೆಡಿಎಸ್ ಮುಖಂಡ ರಾಧಕೃಷ್ಣ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಒಡೆತನದ ಎಸ್‌ಟಿಜಿ ಕಾಲೇಜು ಬಗ್ಗೆ ಮಾತನಾಡುವ ರೈತಸಂಘದವರು ತಮ್ಮದೇ ಶಾಸಕರನ್ನು ಹೊಂದಿದ್ದಾರೆ. ಸಂಸ್ಥೆ ವಿರುದ್ಧ ತನಿಖೆ ನಡೆಸಿ ಅಕ್ರಮಮಗಳನ್ನು ಬಯಲು ಮಾಡಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕ ವಿ.ಎಸ್.ನಿಂಗೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ಯಾದನಹಳ್ಳಿ ಚಲುವರಾಜು, ಶಿವಣ್ಣ, ಬೊಮ್ಮರಾಜು ಸೇರಿದಂತೆ ಹಲವರು ಇದ್ದರು.