ಕಳೆದ ಆ.11 ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.10ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಬರುವ ಡಿ.15ರ ವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಆರ್. ಮಾಧವ ರೆಡ್ಡಿ ಕರೂರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ರೈತರ ಬೆಳೆಗಳಿಗೆ ಅಗತ್ಯವಿರುವಷ್ಟು ನೀರು ಒದಗಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಬೆಳೆ ಬೆಳೆದಿದ್ದು, ಈ ಹಂತದಲ್ಲಿ ನೀರು ಸ್ಥಗಿತಗೊಳಿಸಿದರೆ ಅಪಾರ ನಷ್ಟ ಸಂಭವಿಸಲಿದೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಷ್ಟು ಒಣ ಮೆಣಸಿನಕಾಯಿ ಬೆಳೆಯಲಾಗಿದೆ. ಅಪಾರ ಖರ್ಚು ವೆಚ್ಚ ಮಾಡಿ ಬೆಳೆಗಳು ರೈತರಿಗೆ ದಕ್ಕಬೇಕಾದರೆ ಡಿ.15ರವರೆಗೆ ನೀರು ಪೂರೈಕೆ ಮಾಡಬೇಕು. ಆನ್‌ ಅಂಡ್ ಆಫ್ ಪದ್ಧತಿಯಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಬೆಳೆಗಳು ಕೈಗೆ ಬರುವವರೆಗೆ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರೈತರ ಹಿತಾಸಕ್ತಿ ಸರ್ಕಾರ ಕಡೆಗಣಿಸದೆ ಅನ್ನದಾತರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಆ.11 ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನ.10ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ಕಳೆದ ಅ.13ರಂದು ಏಕಾಏಕಿಯಾಗಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸುವ ಕುರಿತು ಕರ್ನಾಟಕ ನೀರಾವರಿ ನಿಗಮ ತುಂಗಭದ್ರಾ ನೀರಾವರಿ ಶಾಖೆಗೆ ಪತ್ರ ಬರೆದಿರುವುದರಿಂದ ರೈತರಲ್ಲಿ ಆತಂಕ ಶುರುವಾಗಿದೆ. ಕಳೆದ ವರ್ಷವೂ ಬೆಳೆ ನಷ್ಟವಾಯಿತು. ಈ ಬಾರಿ ಬೆಳೆ ದಕ್ಕುವ ಒಂದಷ್ಟು ಆಶಾಭಾವನೆ ಇತ್ತು. ಆದರೆ ಸರ್ಕಾರ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ನಡೆಯಿಂದ ರೈತರು ಆತಂಕ ಪಡುವಂತಾಗಿದೆ ಎಂದು ದೂರಿದರು.

ಅ. 19 ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಎಚ್‌ಎಲ್‌ಸಿ/ಎಲ್‌ಎಲ್‌ಸಿ ಮತ್ತು ಮೇಲ್ಮಟ್ಟದ ಕಾಲುವೆಗಳಿಗೆ ನೀರು ಹರಿಸುವ ಕುರಿತು ಯಾವ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ನೋಡಿ ನಮ್ಮ ಮುಂದಿನ ಹೋರಾಟ ರೂಪಿಸುತ್ತೇವೆ ಎಂದು ಮಾಧವರೆಡ್ಡಿ ಎಚ್ಚರಿಸಿದರು. ರೈತ ಮುಖಂಡ ಸದಾಶಿವ ರೆಡ್ಡಿ, ಬಸವನಗೌಡ, ಪ್ರಭಾಕರ ರೆಡ್ಡಿ, ಉಮಾಪತಿ, ಬಸವರಾಜಸ್ವಾಮಿ, ತಿಮ್ಮನಗೌಡ, ರಾಮನಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಯಾವ ಕಾಳಜಿಯಿಲ್ಲ. ರೈತರ ಬಗ್ಗೆ ಧ್ವನಿ ಎತ್ತುವುದಿಲ್ಲ. ಕಾಲುವೆಗಳಿಗೆ ನೀರು ಹರಿಸುವ ಕುರಿತು ಯಾವ ಕಾಳಜಿ ತೆಗೆದುಕೊಳ್ಳುವುದಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಗಳಿಗೆ ಎರಡು ತಾಸು ತಡವಾಗಿ ಬರುತ್ತಾರೆ. ಇವರು ಬರುವಷ್ಟರಲ್ಲಿ ಸಭೆ ಬಹುತೇಕ ಮುಗಿದಿರುತ್ತದೆ. ಇಂತಹ ಜನಪ್ರತಿನಿಧಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ. ಇಂತಹವರಿಂದ ಯಾವ ರೈತಪರ ಧೋರಣೆ ನಿರೀಕ್ಷಿಸಲು ಸಾಧ್ಯ ಎಂದು ಮಾಧವರೆಡ್ಡಿ ಕರೂರು ಆಕ್ರೋಶ ವ್ಯಕ್ತಪಡಿಸಿದರು.