ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನೀರು ತಮಿಳುನಾಡಿಗೆ ಹರಿಸಬಾರದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನೀರು ತಮಿಳುನಾಡಿಗೆ ಹರಿಸಬಾರದು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಕಿಡಿಕಾರಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತಸಂಘದ ನೂರಾರು ಕಾರ್ಯಕರ್ತರು ತಾಲೂಕು ಕಚೇರಿ ತಲುಪಿ ಸರ್ಕಾರದ ವಿರುದ್ಧ ಹಾಗೂ ಕಾವೇರಿ ನೀರು ಪ್ರಾಧಿಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟವನೆ ಮಾತನಾಡಿದರು. ರಾಜ್ಯದಲ್ಲಿ ಬಾರದ ಛಾಯೆ ಕಂಡಿದೆ. ಈ ಪೈಕಿ ತುಮಕೂರು ಜಿಲ್ಲೆಯ ಹತ್ತು ತಾಲೂಕು ಬರಪೀಡಿತ ತಾಲೂಕುಗಳಾಗಿವೆ. ಮುಂಗಾರು ಕೈಕೊಟ್ಟ ಹಿನ್ನಲೆ ಎಲ್ಲಾ ಡ್ಯಾಂಗಳು ಖಾಲಿಯಾಗಿವೆ. ಕಾವೇರಿ ನೀರು ಪ್ರಾಧಿಕಾರ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ನೀಡಿದ್ದು ಖಂಡನೀಯ. ದೊಡ್ಡ ನಗರಗಳಿಗೆ ಕಾವೇರಿ ಕುಡಿಯುವ ನೀರು ಆಗಿದೆ. ವಾಸ್ತವ ತಿಳಿಯದೆ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಕಾವೇರಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೇಮಾವತಿ ವಿಚಾರದಲ್ಲಿ ಜಿಲ್ಲೆಯ ಕೆಲ ಶಾಸಕರು ಜಾಣ ಮೌನ ವಹಿಸಿದ್ದಾರೆ. ಜಯಚಂದ್ರ, ರಾಜಣ್ಣ, ಸುರೇಶ್ ಬಾಬು, ಷಡಕ್ಷರಿ ಎಲ್ಲರೂ ತುಟಿ ಬಿಚ್ಚಿಲ್ಲ. ಡಿಸಿಎಂ ಪರಮೇಶ್ವರ್ ಅವರು ಪೈಪ್ ಲೈನ್ ಮಾಡಲು ಪಣ ತೊಟ್ಟಿದ್ದಾರೆ. ಹೋರಾಟಕ್ಕೆ ಧುಮುಕಿದ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರನ್ನು ಅಪಮಾನ ಮಾಡಿದ ಕುಣಿಗಲ್ ರಂಗನಾಥ್ ನಡೆ ಸರಿಯಲ್ಲ. ಹೋರಾಟಗಾರರನ್ನು ಡೋಂಗಿ ಎಂದ ಗುಬ್ಬಿ ಶಾಸಕರು, ಈ ಹೋರಾಟಕ್ಕೆ ಕಾಮಗಾರಿ ನಿಂತಿದ್ದು ಎಂಬುದು ಮರೆಯಬಾರದು. ಈಚೆಗೆ ಶತಾಯಗತಾಯ ನೀರು ಬಿಡಲ್ಲ ಎಂದಿದ್ದಾರೆ. ಆದರೆ ಹೋರಾಟದಲ್ಲಿ ಭಾಗವಹಿಸಿ ಹೇಳಿಕೆ ನೀಡಬೇಕಿದೆ. ಈ ರೈತ ವಿರೋಧಿ ಸರ್ಕಾರಕ್ಕೆ ರೈತರಿಂದಲೇ ಶಾಪ ತಪ್ಪಲಿದೆ ಎಂದು ತಿಳಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಕೆಆರ್ ಎಸ್ ಜಲಾಶಯದಲ್ಲಿ ನೀರಿಲ್ಲ. ನಿತ್ಯ ಹೇಗೆ ನೀರು ಹರಿಸಲು ಸಾಧ್ಯ ಎಂಬ ತಾಂತ್ರಿಕ ಅಂಶ ಪ್ರಾಧಿಕಾರಕ್ಕೆ ತಿಳಿದಿಲ್ಲ. ಈ ಸಮಯದಲ್ಲಿ ತಮಿಳುನಾಡಿಗೆ ಹೇಗೆ ಕಾವೇರಿ ಹರಿಸಲಾಗುತ್ತದೆ. ನಮ್ಮ ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರೆಸಬೇಕು ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ಯುವ ಘಟಕದ ಅಧ್ಯಕ್ಷ ಶಿವಕುಮಾರ್‌ ಕರ್ನಾಟಕ ಬಂದ್ ಕರೆ ಹಿನ್ನಲೆ ರೈತ ಸಂಘ ಪ್ರತಿಭಟನೆ ಮಾಡಲು ನಿರ್ಧರಿಸಿ ಸರ್ಕಾರಕ್ಕೆ ಮನವಿ ನೀಡಿದೆ. ಮಳೆಗಾಲ ಚೆನ್ನಾಗಿದ್ದಾಗ ತಮಿಳುನಾಡಿಗೆ ಬೇಕಾದಷ್ಟು ನೀರು ಹರಿದಿದೆ. ನಮ್ಮಲ್ಲಿ ಕುಡಿಯಲು ನೀರಿಲ್ಲ. ಅಲ್ಲಿ ಕೃಷಿ ನಡೆಸಲು ನೀರು ಕೇಳುತ್ತಾರೆ. ಅಮಾನವೀಯ ಆದೇಶ ಪ್ರಾಧಿಕಾರ ನೀಡಿದೆ ಎಂದು ಗುಡುಗಿದರು.

, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಮಂಜುನಾಥ್, ಯತೀಶ್, ವೆಂಕಟೇಶ್, ಬಸವರಾಜು, ಸುರೇಶ್, ದೇವೇಗೌಡ, ಕನ್ನಿಗಪ್ಪ, ರವೀಶ್, ರಾಂಪುರ ಸತೀಶ್, ಶಂಕರಪ್ಪ, ಜಗದೀಶ್, ಕುಮಾರಸ್ವಾಮಿ ಇನ್ನಿತರರು ಇದ್ದರು.