ಕನ್ನಡಪ್ರಭ ವಾರ್ತೆ ಆಲಮಟ್ಟಿ
ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ 36 ಕೆರೆಗಳನ್ನು ಪೂರ್ಣವಾಗಿ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಏಪ್ರಿಲ್‌ನಲ್ಲಿಯೇ ಕೆರೆ ಭರ್ತಿಗೆ ನೀರು ಹರಿಸುವುದಾಗಿ ತಿಳಿಸಲಾಗಿತ್ತು. ಆದರೆ, ಇದುವರೆಗೂ 36 ಕೆರೆಗಳಿಗೆ ಒಂದು ಹನಿ ನೀರೂ ಹರಿದಿಲ್ಲ ಎಂದು ರೈತರು ಆರೋಪಿಸಿದರು. ವಿದ್ಯುತ್ ಪ್ರಸರಣ ಗೋಪುರ ಬಿದ್ದ ಕಾರಣ ನೀರು ಹರಿಸಲು ಆಗುತ್ತಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಗೋಪುರ ಬಿದ್ದು ತಿಂಗಳಾದರೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ ಎಂದು ದೂರಿದರು.ಹುಲಗಬಾಳ, ಜಕ್ಕದಾಳ, ಹಗರಗೊಂಡ, ತಾರನಾಳ, ತಮದಡ್ಡಿ, ಹಡಲಗೇರಿ, ಗುಂಡಕರ್ಜಗಿ, ಪಡೇಕನೂರ, ಆಲಕೊಪ್ಪರ ಸೇರಿ 36 ಕೆರೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನೀರಾವರಿ ಸಲಹಾ ಸಮಿತಿ ಸಭೆಗೆ ಈ ಭಾಗದ ರೈತ ಪ್ರತಿನಿಧಿಗಳನ್ನು ಕರೆಸಬೇಕು. ಕೆರೆ ಭರ್ತಿಯಾಗಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಪಷ್ಟ ಭರವಸೆ ಸಿಗದ ಹೊರತು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ ಪಟ್ಟು ಹಿಡಿದರು.5 ದಿನದಲ್ಲಿ ವಿದ್ಯುತ್ ಗೋಪುರ ನಿರ್ಮಾಣ ಪೂರ್ಣಗೊಳಿಸಿ ಕೆರೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಅಮರೇಗೌಡ ಹಾಗೂ ಅಬೂಬಕರ ಬಾಗವಾನ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮಹಾಂತಗೌಡ ಬಿರಾದಾರ, ಸೀತಪ್ಪ ಗಣಿ, ರವಿ ಕೋತಿನ, ರಾಜು ವಾಲಿಕಾರ, ಅಪ್ಪುಗೌಡ ಪಾಟೀಲ, ಬಸವರಾಜ ಪಾಟೀಲ, ಶ್ರೀಕಾಂತ ಬಿರಾದಾರ, ಸಂಗಪ್ಪ ಟಕ್ಕೇರಿ, ಮಹಾದೇವ ಬನಸೋಡೆ, ಸತ್ಯಪ್ಪ ಕಾಳೆ, ಅಮೋಘಸಿದ್ಧ ಡೋಣೂರ ಸೇರಿ ಹಲವು ರೈತರು ಪಾಲ್ಗೊಂಡಿದ್ದರು.