ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸೆಕ್ ನೀರು ಹರಿಸಿದರೆ 15 ಟಿಎಂಸಿ ನೀರು ಖಾಲಿಯಾಗಿ ಜಲಾಶಯ ಬರಿದಾಗುತ್ತದೆ. ಇದರಿಂದ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ತಮಿಳುನಾಡಿಗೆ ಹದಿನೈದು ದಿನಗಳವರೆಗೆ ಪ್ರತಿದಿನ 12 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಕಾಡಾ ಕಚೇರಿ ಬಳಿ ಪ್ರತಿಭಟಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹೊಸಕೋಟೆ ಬಸವರಾಜು, ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸೆಕ್ ನೀರು ಹರಿಸಿದರೆ 15 ಟಿಎಂಸಿ ನೀರು ಖಾಲಿಯಾಗಿ ಜಲಾಶಯ ಬರಿದಾಗುತ್ತದೆ. ಇದರಿಂದ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.

ಸರ್ಕಾರ ಸಿ.ಡಬ್ಲ್ಯೂ.ಆರ್.ಸಿ ಆದೇಶ ಪಾಲಿಸಬಾರದು. ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿಲ್ಲ. ಕಳೆದ ಕೆಲದಿನಗಳಿಂದ ಬೀಳುತ್ತಿದ್ದ ಮಳೆಯೂ ಕಡಿಮೆ ಆಗಿದೆ. ಜಲಾಶಯದ ನೀರನ್ನು ಕುಡಿಯಲು ಹಾಗೂ ಕೆರೆ ತುಂಬಿಸಲು ಆದ್ಯತೆಯ ಮೇರೆಗೆ ಬಳಸಬೇಕು. ಸರ್ಕಾರ ತಕ್ಷಣವೇ ಐಸಿಸಿ ಸಭೆ ಕರೆದು ರೈತರಿಗೆ ಬಿತ್ತನೆ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ವಪಕ್ಷ ಸಭೆಯ ತೀರ್ಮಾನದಂತೆ ರಾಜ್ಯದ ರೈತರು, ಜಾನುವಾರು ಹಾಗೂ ಬೆಂಗಳೂರು, ಮೈಸೂರು ನಗರಗಳ ಕುಡಿಯುವ ನೀರಿನ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಿ. ಮರಂಕಯ್ಯ, ಮಹೇಶ್, ಮಹೇಂದ್ರ, ಮಹೇಶ್, ರಘು, ಕುಮಾರ್, ಪ್ರಕಾಶ್, ಬಸಪ್ಪ, ನಾಗನಹಳ್ಳಿ ಚಂದ್ರಶೇಖರ್ ಮೊದಲಾದವರು ಇದ್ದರು.

ಸಿಡಬ್ಲ್ಯೂಆರ್.ಸಿ ಆದೇಶ ಖಂಡಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮೈಸೂರುಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ನೀಡಿರುವ ಆದೇಶ ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರತಿಭಟಿಸಿದರು.

ನಗರದ ಅಶೋಕ ರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರಸ್ತೆ ತಡೆ ನಡೆಸಿದರು. ಬಳಿಕ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ನೀಡಿರುವ ಆದೇಶ ಹಿಂದಕ್ಕೆ ಪಡೆಯಬೇಕು. ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು. ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಪರಿಸ್ಥಿತಿಯನ್ನು ಪರಿಗಣಿಸದೆ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಅವರು ಒತ್ತಾಯಿಸಿದರು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್, ಮುಖಂಡರಾದ ತೇಜೇಶ್ ಲೋಕೇಶ್ ಗೌಡ, ಮೆಲ್ಲಹಳ್ಳಿ ಮಹದೇವಸ್ವಾಮಿ, ಮೂಗೂರು ನಂಜುಂಡಸ್ವಾಮಿ, ಸುರೇಶ್ ಗೌಡ, ಕೆ.ಬಿ. ಲಿಂಗರಾಜು, ಸೋಮೇಗೌಡ, ಸಿಂಧುವಳ್ಳಿ ಶಿವಕುಮಾರ್, ಸಂತೋಷ್, ಪ್ರಭುಶಂಕರ, ಹನುಮಂತಯ್ಯ, ಬಾಲಿ, ಶ್ರೀನಿವಾಸ, ಕೃಷ್ಣಪ್ಪ ಮೊದಲಾದವರು ಇದ್ದರು.