ಈ ವರ್ಷ ಮುಂಗಾರುಮಳೆ ತೀವ್ರ ಕೊರತೆಯಾಗಿದ್ದು, ಕೇವಲ ಶೇ. ೨೪ರಷ್ಟು ಮಳೆಯಾಗಿದೆ. ರೈತರು ಬಿತ್ತನೆ ಮಾಡಿದ್ದರೂ ಮಳೆಯಿಲ್ಲದೆ ಬೀಜಗಳು ಮೊಳಕೆಯೊಡೆಯದೆ ಭೂಮಿಯಲ್ಲೇ ಹಾಳಾಗಿವೆ. ಬರ ಪರಿಸ್ಥಿತಿಯನ್ನು ಸರ್ಕಾರವೇ ಗುರುತಿಸಿ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ, ರೈತರಿಗೆ ಸಾಲ ಮನ್ನಾ, ಪ್ರಧಾನಮಂತ್ರಿ ಫಸಲ್ ಭೀಮಾ ವಿಮೆ ಹಾಗೂ ಬೆಳೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಾಲ ಮನ್ನಾ ಮಾಡಬೇಕು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವಿಮಾ ಮೊತ್ತ ಹಾಗೂ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಅನ್ನದಾತ ಮಹಿಳಾ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷೆ ಅನು ಮಾತನಾಡಿ, ಈ ವರ್ಷ ಮುಂಗಾರುಮಳೆ ತೀವ್ರ ಕೊರತೆಯಾಗಿದ್ದು, ಕೇವಲ ಶೇ. ೨೪ರಷ್ಟು ಮಳೆಯಾಗಿದೆ. ರೈತರು ಬಿತ್ತನೆ ಮಾಡಿದ್ದರೂ ಮಳೆಯಿಲ್ಲದೆ ಬೀಜಗಳು ಮೊಳಕೆಯೊಡೆಯದೆ ಭೂಮಿಯಲ್ಲೇ ಹಾಳಾಗಿವೆ. ಬರ ಪರಿಸ್ಥಿತಿಯನ್ನು ಸರ್ಕಾರವೇ ಗುರುತಿಸಿ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ, ರೈತರಿಗೆ ಸಾಲ ಮನ್ನಾ, ಪ್ರಧಾನಮಂತ್ರಿ ಫಸಲ್ ಭೀಮಾ ವಿಮೆ ಹಾಗೂ ಬೆಳೆ ಪರಿಹಾರ ಸಮರ್ಪಕವಾಗಿ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಇದನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಮುಂದಾಗಬೇಕು. ‘ರೈತ ಸಾಲಗಾರನಲ್ಲ, ಸರ್ಕಾರವೇ ಬಾಕಿದಾರ’ ಎಂಬ ನಿಲುವಿನೊಂದಿಗೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವಿಮಾ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಜಿಲ್ಲೆ ಹಾಗೂ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ೮ ಗಂಟೆ ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ನೀಡಬೇಕು. ತಾಲೂಕಿನ ಎಲ್ಲ ಏತ ನೀರಾವರಿ ಯೋಜನೆಗಳನ್ನು ಕಾರ್ಯಾರಂಭಗೊಳಿಸಬೇಕು. ಕಂದಾಯ ಇಲಾಖೆಯಲ್ಲಿ ಲಂಚಮುಕ್ತ ಆಡಳಿತ ಜಾರಿಗೊಳಿಸಬೇಕು. ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆ ಮುಂದುವರಿಸಬೇಕು. ಸರಕಾರವು ಪ್ರತಿ ಎಕರೆಗೆ ೨೫೦೦ ಸಾವಿರ ಪರಿಹಾರ ಹಾಕಲಾಗಿದ್ದು, ಕನಿಷ್ಠ ₹೫೦ ಸಾವಿರ ಪರಿಹಾರ ಹಣ ನೀಡಬೇಕು. ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುವ ಪಿಂಚಣಿ ಮೊತ್ತವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಅಲ್ಲದೆ, ರೈತರಿಗೆ ಅಗತ್ಯವಾದ ಆರ್ಥಿಕ ನೆರವು ಹೆಚ್ಚಿಸಬೇಕು ಹಾಗೂ ರಾಜ್ಯದ ಬ್ಯಾಂಕ್‌ಗಳು ಸಾಲ ವಸೂಲಿಗಾಗಿ ರೈತರಿಗೆ ನ್ಯಾಯಾಲಯದ ನೋಟಿಸ್ ನೀಡುವ ಕ್ರಮ ಕೈಗೊಳ್ಳದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ವಾಜೀಬ್ ಬೇಗ್, ಜಿಲ್ಲಾಧ್ಯಕ್ಷ ನಾಗರಾಜು, ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯತ್ರಿ, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ದೇವರಾಜು, ರಾಜ್ಯ ಅನ್ನದಾತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಉಮಾಶ್ರೀ, ರೈತ ಮುಖಂಡರಾದ ಯೋಗೀಶ್, ರವಿ, ಪಾಪಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.