ಭೂಮಾಪಕರ ಮುಷ್ಕರಕ್ಕೆ ರೈತ ಸಂಘದ ಬೆಂಬಲ

| Published : Jul 07 2025, 11:48 PM IST

ಸಾರಾಂಶ

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಸೇವೆ ಕಾಯಂಗೊಳಿಸುವಂತೆ ಸರ್ಕಾರಿ ಭೂ ಮಾಪಕರ ಕಚೇರಿ ಆವರಣದಲ್ಲಿ ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಅರಕಲಗೂಡು: ಸೇವಾ ಭದ್ರತೆ, ಕನಿಷ್ಠ ವೇತನವೂ ಇಲ್ಲದೆ ದುಡಿಯುತ್ತಿರುವ ಭೂ ಮಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ ತಿಳಿಸಿದರು. ಪಟ್ಟಣದಲ್ಲಿ ಭೂ ಮಾಪಕರ ಮುಷ್ಕರ ಬೆಂಬಲಿಸುವಂತೆ ಮುಷ್ಕರ ನಿರತರಿಂದ ಸೋಮವಾರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಸೇವೆ ಕಾಯಂಗೊಳಿಸುವಂತೆ ಸರ್ಕಾರಿ ಭೂ ಮಾಪಕರ ಕಚೇರಿ ಆವರಣದಲ್ಲಿ ಕಳೆದ ಒಂದು ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಮುಷ್ಕರ ನಿರತರು ಕೆಲಸ ಸ್ಥಗಿತಗೊಳಿಸಿರುವುದರಿಂದ ರೈತರ ಕೆಲಸಗಳಿಗೆ ತೊಂದರೆಯಾಗಿದೆ. ತಕರಾರು, ಕೋರ್ಟ್ ಆದೇಶ ಪ್ರಕರಣ, ಪೋಡಿಮುಕ್ತ, ಆಕಾರಬಂದ್, ಡಿಜಿಟಲೀಕರಣ, ದರ್ಖಾಸ್ತು ಪೋಡಿ, ಸ್ವಮಿತ್ತ ಮತ್ತಿತರ ಪ್ರಕರಣಗಳನ್ನು ನಿರ್ವಹಿಸುತ್ತಿರುವ ಭೂ ಮಾಪಕರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಇಲ್ಲವಾದರೆ ರೈತ ಸಂಘದಿಂದ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ಸಮಿತಿ ಸದಸ್ಯ ವಿ. ಹೇಮಂತ್ ಕುಮಾರ್, ತಾಲೂಕು ಪರವಾನಗಿ ಭೂ ಮಾಪಕರ ಸಂಘದ ಬಿ.ಎಂ. ಶಿವರಾಜು, ಎಚ್.ಪಿ. ಶ್ರೀನಿವಾಸ್, ಎಚ್. ಅಭಿಷೇಕ್, ಯು.ಎಸ್. ನಯನ್, ಟಿ.ಕೆ. ಮಂಜೇಗೌಡ, ಬಿ.ಕೆ. ವಿನೋದ್ ಕುಮಾರ್, ಶಶಾಂಕ್, ನಿಖಿಲ್, ಜಯಂತ್ ಇತರರಿದ್ದರು.