ಹೊಸಪೇಟೆ: ಯೂರಿಯಾ ಗೊಬ್ಬರ ಅಭಾವ ನೀಗಿಸುವ ಮೂಲಕ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಜಂಟಿ ಕೃಷಿ ನಿರ್ದೇಶಕರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಡಿ.ಎ.ಪಿ 20.20.0.13 ಮತ್ತು 10.26 ಅಮೋನಿಯಂ ಸಲ್ಫೇಟ್ ಮತ್ತು ಪಾಸ್‌ಪೇಟ್ ಇನ್ನಿತರೆ ಗೊಬ್ಬರಗಳ ಬೆಲೆ ಗಗನಕ್ಕೇರಿದೆ. ಗೊಬ್ಬರದ ಬೆಲೆ ಕಡಿಮೆ ಮಾಡಬೇಕು. ಸಮರ್ಪಕವಾಗಿ ಯೂರಿಯಾ ವಿತರಿಸಬೇಕು. ಫಾರ್ಮರ್ ಐಡಿ ರದ್ದು ಪಡಿಸಬೇಕು. ಸರ್ಕಾರಿ ಭೂಮಿ, ಹಳ್ಳ ಪರಂಪೋಕು ಮತ್ತು ಅರಣ್ಯ ಭೂಮಿಗಳಲ್ಲಿ ರೈತರು ಸುಮಾರು 60​-70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ರೈತರಿಗೆ ಎಫ್.ಐ.ಡಿ.ಯಿಂದ ಯುರಿಯಾ ಗೊಬ್ಬರ ಸಿಗುವುದಿಲ್ಲ. ಏಕೆಂದರೆ ಪಹಣಿ ಪಟ್ಟಾ ಜಾಗದಲ್ಲಿ ಸರ್ಕಾರಿ ಎಂದು ನಮೂದಾಗಿರುತ್ತದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗುತ್ತಾನೆ.

ಹೊಸಪೇಟೆ ತಾಲೂಕಿನಲ್ಲಿ ಬಹುತೇಕ ರೈತರು ಕಬ್ಬು, ಬಾಳೆ, ಭತ್ತವನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಫಾರ್ಮರ್ ಐಡಿ ಪ್ರಕಾರ ಒಂದು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ಸಾಕಾಗುವುದಿಲ್ಲ, ಹಾಗಾಗಿ, ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡಬೇಕು.

ಹೊಸಪೇಟೆ ತಾಲೂಕಿನಲ್ಲಿ ಮಣ್ಣು ಪರೀಕ್ಷೆ ಕೇಂದ್ರ ಹಾಗೂ ಭತ್ತ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು. ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ರೈತ ಸಂಘದ ಮುಖಂಡರಾದ ಸಣ್ಣಕ್ಕಿ ರುದ್ರಪ್ಪ, ಟಿ. ನಾಗರಾಜ್, ದೊಡ್ಡ ಗಾಳೇಪ್ಪ, ಸುರೇಶ್, ಭುವನಹಳ್ಳಿ ಬಸವರಾಜ್, ಜಾಕೀರ್ ಹುಸೇನ್, ಗಂಟೆ ಮಂಜುನಾಥ, ಮಂಜುನಾಥ ಸಿಂಗ್, ಜಾನಕಿರಾಮ್, ರಾಮಾಂಜಿನಿ, ಸತೀಶ ಸೇರಿದಂತೆ ಇತರರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.