ಕನ್ನಡಪ್ರಭ ವಾರ್ತೆ ಮದ್ದೂರು
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ತಾಲೂಕು ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.ರೈತ ಸಂಘ, ಹಸಿರು ಸೇನೆ ಏಕೀಕರಣ ಸಮಿತಿ ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಬುಧವಾರ ಪ್ರವಾಸಿ ಮಂದಿರ ವೃತ್ತದಿಂದ ಪೇಟೆ ಬೀದಿ, ಶಿವಪುರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೈಕ್ ರ್‍ಯಾಲಿ ನಡೆಸಿ ಬಂದ್ ಗೆ ಬೆಂಬಲ ನೀಡುವಂತೆ ವರ್ತಕರಲ್ಲಿ ಮನವಿ ಮಾಡಿದರು.
ಬೈಕ್ ರ್‍ಯಾಲಿ ವೇಳೆ ಶಿವಪುರದ ಕೊಪ್ಪ ಹೊಸ ವೃತ್ತದಲ್ಲಿ ದಿಢೀರ್ ರಸ್ತೆ ತಡೆ ನಡೆಸಿದ ರೈತರು ಹಾಗೂ ಕಜವೇ ಕಾರ್ಯಕರ್ತರು ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಪ್ರತಿನಿತ್ಯ 12ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.ದಿಢೀರ್ ಪ್ರತಿಭಟನೆಯಿಂದಾಗಿ ಬೆಂಗಳೂರು- ಮೈಸೂರು ಹಳೆಯ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು. ನಂತರ ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನೆ ಕೈ ಬಿಟ್ಟು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಬಂಧನದ ಬೆದರಿಕೆ ಹಾಕಿದ ಘಟನೆ ನಡೆಯಿತು. ನಂತರ ಮತ್ತೆ ಬೈಕ್ ರ್‍ಯಾಲಿ ನಡೆಸಿದ ಕಜವೇ ಕಾರ್ಯಕರ್ತರು ನ್ಯಾಯಾಲಯಕ್ಕೆ ತೆರಳಿ ಗುರುವಾರದ ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ವಕೀಲರ ಸಂಘದ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕಜವೇ ಜಿಲ್ಲಾಧ್ಯಕ್ಷ ವಿ ಸಿ ಉಮಾಶಂಕರ, ಕಾವೇರಿ ನೀರು ನಮ್ಮ ಹಕ್ಕು. ಸರ್ಕಾರ ಯಾವುದೇ ಕಾರಣಕ್ಕೂ ನಿರ್ವಹಣಾ ಮಂಡಳಿ ಆದೇಶಕ್ಕೆ ತಲೆಬಾಗದೆ ತಮಿಳುನಾಡಿಗೆ ನೀರು ಹರಿಸಬಾರದು. ಸರ್ಕಾರಗಳನ್ನು ಎಚ್ಚರಿಸಲು ಕರ್ನಾಟಕ ಬಂದ್ ಬೆಂಬಲಿಸಿ ಮದ್ದೂರು ಬಂದ್ ಯಶಸ್ವಿಗೊಳಿಸಲು ವರ್ತಕರು, ಕೈಗಾರಿಕೋದ್ಯಮಿಗಳು, ಬೀದಿ ಬದಿ ವ್ಯಾಪಾರಿಗಳು ಸಹಕರಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಭುಲಿಂಗ, ಸೊ.ಸಿ ಪ್ರಕಾಶ್, ಗುಡಿದೊಡ್ಡಿ ಶಿವಲಿಂಗಯ್ಯ, ಕೀಳಘಟ್ಟ ನಂಜುಂಡಯ್ಯ, ಎಂ.ಸಿ.ಲಿಂಗರಾಜು, ವಿ.ಪಿ.ವಿಶ್ವಾಸ್, ವಿ.ಎಚ್.ಶಿವಲಿಂಗಯ್ಯ, ವಿ.ಪಿ.ವರದರಾಜು, ಸೊಂಪುರ ಉಮೇಶ್ ಸೇರಿದಂತೆ ಸಂಘಟಕರು ಹಾಜರಿದ್ದರು.