ಮಾಜಿ ಶಾಸಕ ಸೊಗಡು ಶಿವಣ್ಣ ವಿರುದ್ಧ ರೈತಸಂಘದ ಆಕ್ರೋಶ

| Published : Dec 04 2024, 12:31 AM IST

ಮಾಜಿ ಶಾಸಕ ಸೊಗಡು ಶಿವಣ್ಣ ವಿರುದ್ಧ ರೈತಸಂಘದ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಕೂಡ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಆಗೆಯುವುದಿಲ್ಲ. ಪ್ರತಿಭಟನೆಗೆ ಅವಕಾಶ ನೀಡಿ ಎಂದು ರೈತರು ತಂದಿದ್ದ ಹಾರೆ ಕೋಲು, ಗುದ್ದಲಿ ಹಾಗೂ ಜೆಸಿಬಿ ಯಂತ್ರಗಳೊಂದಿಗೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ಯೋಜನೆ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ತುಮಕೂರಿನಲ್ಲಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಮಂಗಳವಾರ ಮಾಜಿ ಶಾಸಕ ಸೊಗಡು ಶಿವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ತುಮಕೂರು ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ತವರೂರು ಮಾಗಡಿ ತಾಲೂಕಿಗೆ ಹೇಮಾವತಿ ಕುಡಿಯುವ ನೀರನ್ನು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಸೊಗಡು ಶಿವಣ್ಣ ಡಿ. 4 ರಿಂದ ಪಾದಯಾತ್ರೆ ಮಾಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ. ರೈತ ವಿರೋಧಿ ನಡೆಯನ್ನು ಮಾಡುತ್ತಿರುವ ಸೊಗಡು ಶಿವಣ್ಣರವರಿಗೆ ಅಲ್ಲಿನ ಬುದ್ಧಿಜೀವಿಗಳು ಅವರಿಗೆ ಬುದ್ಧಿ ಮಾತನ್ನು ಹೇಳಬೇಕು ಎಂದರು.

ಸೊಗಡು ಶಿವಣ್ಣರವರ ಮನೆಯಿಂದ ನೀರು ಕೇಳುತ್ತಿಲ್ಲ. ನಮ್ಮ ಪಾಲಿಗೆ ಬರಬೇಕಾದ ಮುಕ್ಕಾಲು ಟಿಎಂಸಿ ನೀರನ್ನು ಕೇಳುತ್ತಿದ್ದೇವೆ. ಇದನ್ನು ಕೊಡಲ್ಲ ಎಂದು ಹೇಳಲು ಅವನು ಯಾರು? ಅವಿವೇಕಿ ರೀತಿಯಲ್ಲಿ ವರ್ತನೆ ಮಾಡುತ್ತಿದ್ದು, ಇದೇ ರೀತಿ ವರ್ತನೆಯನ್ನು ಮುಂದುವರಿಸಿದರೆ ರೈತ ಸಂಘದಿಂದ ಮತ್ತಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಾವು ಈ ಬಾರಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವ ಜನ ನಾಯಕರ ವಿರುದ್ಧವಾಗಿ ಮಾಗಡಿ - ಕುಣಿಗಲ್ ಮುಖ್ಯರಸ್ತೆ ಅಗಿಯುವ ಮೂಲಕ ದೊಡ್ಡ ಪಾಠವನ್ನು ಕಲಿಸಬೇಕೆಂದು ರೈತ ಸಂಘ ತೀರ್ಮಾನ ಮಾಡಲಾಗಿತ್ತು.

ಸಾರ್ವಜನಿಕರ ದೃಷ್ಟಿಯಿಂದ ರಸ್ತೆ ಅಗೆಯುವ ಕೆಲಸವನ್ನು ನಿಲ್ಲಿಸಲಾಗಿದ್ದು, ಇದೇ ರೀತಿ ವಿರೋಧ ವ್ಯಕ್ತಪಡಿಸಿದರೆ ತುಮಕೂರಿಗೆ ಬಂದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸೊಗಡು ಶಿವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಯ ಅಗೆಯಲು ಅವಕಾಶ ನೀಡದ ಪೊಲೀಸರು:

ರೈತ ಸಂಘ ಹಸಿರು ಸೇನೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ವಿರೋಧದ ಹಿನ್ನೆಲೆಯಲ್ಲಿ ಮಾಗಡಿ- ಕುಣಿಗಲ್ ಮುಖ್ಯರಸ್ತೆ ಅಗೆಯುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡುವ ಮುನ್ನವೇ ರೈತ ಸಂಘದ ಮುಖಂಡರ ಜೊತೆ ಮಾತನಾಡಿ ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶ ಕೊಡುವುದಿಲ್ಲ. ಕೇವಲ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಲಾಗುತ್ತದೆ, ಒಂದು ವೇಳೆ ರಸ್ತೆ ಅಗೆಯಲು ಮುಂದಾದರೆ ರೈತರನ್ನು ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.

ರೈತರು ಕೂಡ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಆಗೆಯುವುದಿಲ್ಲ. ಪ್ರತಿಭಟನೆಗೆ ಅವಕಾಶ ನೀಡಿ ಎಂದು ರೈತರು ತಂದಿದ್ದ ಹಾರೆ ಕೋಲು, ಗುದ್ದಲಿ ಹಾಗೂ ಜೆಸಿಬಿ ಯಂತ್ರಗಳೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರತಿಕೃತಿ ದಹನ:

ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಸೊಗಡು ಶಿವಣ್ಣ ವಿರುದ್ಧ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿ ಸೊಗಡೂರು ಶಿವಣ್ಣ ಭಾವಚಿತ್ರದ ಪ್ರತಿಕೃತಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪುರಸಭೆ ಸದಸ್ಯ ರಾಮು, ಹಳ್ಳಿಕಾರ್ ಹನುಮಂತರಾಜು, ರೈತ ಸಂಘದ ತಾಲೂಕು ಯುವ ಘಟಕ ಅಧ್ಯಕ್ಷ ರವಿಕುಮರ್, ರೈತ ಮುಖಂಡರಾದ ಶಿವಲಿಂಗಯ್ಯ, ಚಂದ್ರಯಪ್ಪ, ಬುಡನ್ ಸಾಬ್, ಕಾಂತರಾಜು, ನಾರಾಯಣ್, ಮಾಜಿ ಪುರಸಭಾ ಅಧ್ಯಕ್ಷರು ಜಯಲಕ್ಷ್ಮಿ ರೇವಣ್ಣ, ಚಿಕ್ಕಣ್ಣ, ಕರಿಯಪ್ಪ, ಮುನಿರಾಜ್, ರಾಜಣ್ಣ, ರಂಗಸ್ವಾಮಯ್ಯ, ತಗೀಕುಪ್ಪೆ ನಾರಾಯಣ್, ಗುಡ್ಡಳ್ಳಿ ರಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.