ಕೆಐಎಡಿಬಿಯಿಂದ ರೈತರ ಬಗರ್ ಹುಕುಂ ಭೂಮಿ ಸ್ವಾಧೀನ: ರೈತ ಸಂಘ ವಿರೋಧ

| Published : Aug 13 2024, 12:46 AM IST

ಸಾರಾಂಶ

ರೈತರು ಈಗಲೂ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೇ ಮಾಡಿ, ಗಡಿಗಳನ್ನು ಗುರುತಿಸಿ, ಹದ್ದುಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕು ಮತ್ತು ಅನಗತ್ಯವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈತರಿಗೆ ತೊಂದರೆ ಕೊಡದಂತೆ ಸೂಚಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಮನವಿ ಮಾಡಿಕೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಸರ್ವೇ ನಂಬರ್ ೩೫ ರಲ್ಲಿ ಸರ್ಕಾರದಿಂದ ಮಂಜೂರಾಗಿರುವ, ರೈತರ ಸ್ವಾಧೀನದಲ್ಲಿರುವ ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಕೆಐಎಡಿಬಿಯವರು ಬಲವಂತವಾಗಿ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘಟನೆಯು ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಪಿಆರ್ ಎಸ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟಿಸಿ ಡೀಸಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೇ ನಂಬರ್ ೩೫ ರಲ್ಲಿ ೨೬ ರೈತ ಕುಟುಂಬಗಳಿಗೆ ತಲಾ ೦.೨೬ ಎಕರೆಯಂತೆ ಕೃಷಿ ಭೂಮಿಯನ್ನು ೧೯೭೭ ರಲ್ಲಿ ಬಗರ್ ಹುಕುಂ ಸಾಗುವಳಿಯ ಅಧಾರದಲ್ಲಿ ಮಂಜೂರು ಮಾಡಿ, ಹಂಗಾಮಿ ಸಾಗುವಳಿ ಚೀಟಿಯನ್ನು ಹಾಸನ ತಹಸೀಲ್ದಾರ್ ರವರ ಕಚೇರಿಯಿಂದ ನೀಡಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಈ ಎಲ್ಲಾ ಕುಟುಂಬಗಳು ಈ ಭೂಮಿಯನ್ನು ಸಾಗುವಳಿ ಮಾಡಿ ಬೆಳೆ ಬೆಳೆದು ಸ್ವಾಧೀನಾನುಭವದಲ್ಲಿರುತ್ತಾರೆ. ಪಹಣಿಗಳಲ್ಲೂ ಇವರ ಹೆಸರುಗಳು ಬರುತ್ತಿವೆ. (ಆದರೆ ಇದುವರೆಗೂ ಈ ಭೂಮಿ ಪೋಡಿ ಆಗಿಲ್ಲ) ಎಂದರು. ೧೯೯೭ ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹಾಸನದ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ರೈತರು ಸ್ವಾಧೀನದಲ್ಲಿರುವ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಸ್ವಾಧೀನಪಡಿಸಿಕೊಂಡು ಪರಿಹಾರವನ್ನು ನೀಡಿದ್ದಾರೆ. ಆದರೆ ೨೬ ಕುಟುಂಬಗಳಿಗೆ ಮಂಜೂರಾಗಿದ್ದ ತಲಾ ೦.೨೬ ಎಕರೆ ಜಾಗದಲ್ಲಿ ಕೆಐಡಿಬಿಯವರು ಭೂಸ್ವಾದೀನ ಮಾಡಿಕೊಂಡು ಉಳಿದಿರುವ ಭೂಮಿಯಲ್ಲಿ ರೈತರು ಈಗಲೂ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಉಳಿಕೆ ಭೂಮಿಯನ್ನೂ ತಮಗೆ ಸೇರಬೇಕೆಂದು ರೈತರ ಮೇಲೆ ದೌರ್ಜನ್ಯ ನಡೆಸಿ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು, ಇದನ್ನು ರೈತರು ಪ್ರತಿಭಟಿಸಿ ತಡೆದಿದ್ದಾರೆ ಎಂದು ಹೇಳಿದರು.

ರೈತರು ಈಗಲೂ ಅನುಭವದಲ್ಲಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಉಳಿಕೆ ಭೂಮಿಯನ್ನು ಸರ್ವೇ ಮಾಡಿ, ಗಡಿಗಳನ್ನು ಗುರುತಿಸಿ, ಹದ್ದುಬಸ್ತ್ ಮೂಲಕ ಪೋಡಿ ಮಾಡಿಕೊಡಬೇಕು ಮತ್ತು ಅನಗತ್ಯವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ರೈತರಿಗೆ ತೊಂದರೆ ಕೊಡದಂತೆ ಸೂಚಿಸಬೇಕೆಂದು ಸರ್ಕಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಹಾಸನ ಜಿಲ್ಲಾ ಸಮಿತಿ ಮನವಿ ಮಾಡಿಕೊಳ್ಳುತ್ತದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದೆ ರೈತರ ಜೊತೆ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೆಪಿಆರ್ ಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಜಯಲಕ್ಷ್ಮೀ, ಮೂರ್ತಿ, ಅರವಿಂದ್, ರಾಜೇಶ್, ಜಯಮ್ಮ, ಪ್ರಕಾಶ್, ಹರೀಶ್ ಸೇರಿ ಇತರರು ಉಪಸ್ಥಿತರಿದ್ದರು.