ಸಾರಾಂಶ
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಧನ ಧಾನ್ಯ ಕೃಷಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರೈತರ ಸಮೃದ್ಧಿ ಬದುಕಿಗೆ ಹೊಸ ದಿಕ್ಸೂಚಿಯನ್ನು ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಧನ ಧಾನ್ಯ ಕೃಷಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರೈತರ ಸಮೃದ್ಧಿ ಬದುಕಿಗೆ ಹೊಸ ದಿಕ್ಸೂಚಿಯನ್ನು ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು. ನಗರದ ಗುರುಕುಲಾನಂದಾಶ್ರಮದಲ್ಲಿ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ನಡೆದ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ನೇರ ಪ್ರಸಾರ ಕಾರ್ಯಕ್ರಮ ಹಾಗೂ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಅಭಿವೃದ್ಧಿಯಾಗಬೇಕಾದರೆ ಈ ಯೋಜನೆಗಳು ಅರ್ಹರಿಗೆ ತಲುಪಬೇಕು. ಕೃಷಿಕರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ 42ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಕೃಷಿ ಯೋಜನೆಗಳನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಈ ಯೋಜನೆ ಕೇವಲ ಕಾಟಾಚಾರದ ಯೋಜನೆ ಅಲ್ಲ. ಬದಲಾಗಿ ಇದು ಭಾರತದ ಕೃಷಿ ಪುನರುಜ್ಜೀವನದ ಹೊಸ ಅಧ್ಯಾಯ. ದೇಶದ ರೈತರ ಆದಾಯವನ್ನು ಸ್ಥಿರಗೊಳಿಸಲು, ಬೆಳೆ ಉತ್ಪಾದಕತೆ ಹಾಗೂ ಮೌಲ್ಯವರ್ಧನೆ ಹೆಚ್ಚಿಸಲು, ಸಂಗ್ರಹಣೆ ಮಾರುಕಟ್ಟೆ ಸಂಪರ್ಕ ಬಲಪಡಿಸಲು ಮತ್ತು ಕೃಷಿಯನ್ನು ನೂತನ ತಂತ್ರಜ್ಞಾನ ಹಾಗೂ ಸಂಸ್ಥೆಗಳ ಮೂಲಕ ಬಲಪಡಿಸಲು ಇದು ರಾಷ್ಟ್ರದ ಸಮಗ್ರ ಕಾರ್ಯಯೋಜನೆಯಾಗಿದೆ. ಕೃಷಿ ಕ್ಷೇತ್ರದ ಬೆಳವಣಿಗೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಿಂದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಿದ್ದು, ಅದರಂತೆ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ತಂದಿದ್ದಾರೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ ಪ್ರಯೋಜನವಾಗಲಿದ್ದು, ರೈತರ ಆದಾಯ ಹೆಚ್ಚಳ ಮತ್ತು ಕೃಷಿ ಕ್ಷೇತ್ರದಲ್ಲಿ ಸ್ಥಿರತೆಯನ್ನು ಸಾಧಿಸುವ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲಿದೆ. ದೇಶದ ನೂರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು ಕರ್ನಾಟಕದಲ್ಲಿ ತುಮಕೂರು, ಚಿತ್ರದುರ್ಗ, ಕೊಪ್ಪಳ, ಗದಗ, ಹಾವೇರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಈ ಯೋಜನೆ ಜಾರಿಯಾಗಲಿದೆ. ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಈ ಯೋಜನೆ ಫಲ ಅರ್ಹರಿಗೆ ದೊರಕಿಸಿಕೊಡುವ ಮೂಲಕ ಭವ್ಯ ಭಾರತದ ಕನಸನ್ನು ನನಸು ಮಾಡಬೇಕು ಎಂದರು. ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಜೈವಿಕ ಮತ್ತು ತಾಂತ್ರಿಕತೆಯನ್ನು ನಾವು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಬೇಕು. ಪ್ರಧಾನಿಗಳು ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು ಅದರಲ್ಲೂ ನಮ್ಮ ರಾಜ್ಯದ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಷಯ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಕೆ. ಷಡಕ್ಷರಿ , ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಶಾಸಕ ಜ್ಯೋತಿಗಣೇಶ್, ಹೆಬ್ಬಾಕ ರವಿ, ಹುಚ್ಚಯ್ಯ, ಕೆ.ಟಿ. ಶಾಂತಕುಮಾರ್, ನಗರಸಭೆ ಪ್ರಭಾರ ಅಧ್ಯಕ್ಷೆ ಮೇಘಶ್ರೀ, ಡಾ. ಶಂಕರ್ ಇತರರಿದ್ದರು.