ಕಬ್ಬಿಗೆ ಹೆಚ್ಚಿನ ಬೆಲೆ ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದವರು ನಡೆಸುತ್ತಿರುವ ಹೋರಾಟ ಸ್ವಾಗತಾರ್ಹವಾಗಿದ್ದರೂ ಈ ಹೋರಾಟದಲ್ಲಿ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಮಾತ್ರ ಒತ್ತು ನೀಡದೆ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹಾಗೂ ರಾಜ್ಯ ಸಲಹಾ ಬೆಲೆ ನೀಡುವುದನ್ನು ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಿದಾಗ ಮಾತ್ರ ರೈತರಿಗೆ ವೈಜ್ಞಾನಿಕ ಬೆಲೆ ಸಿಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಬ್ಬಿಗೆ ಹೆಚ್ಚಿನ ಬೆಲೆ ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದವರು ನಡೆಸುತ್ತಿರುವ ಹೋರಾಟ ಸ್ವಾಗತಾರ್ಹವಾಗಿದ್ದರೂ ಈ ಹೋರಾಟದಲ್ಲಿ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಮಾತ್ರ ಒತ್ತು ನೀಡದೆ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹಾಗೂ ರಾಜ್ಯ ಸಲಹಾ ಬೆಲೆ ನೀಡುವುದನ್ನು ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಿದಾಗ ಮಾತ್ರ ರೈತರಿಗೆ ವೈಜ್ಞಾನಿಕ ಬೆಲೆ ಸಿಗಲು ಸಾಧ್ಯ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಹೇಳಿದರು.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರಧಾನ ಆದ್ಯತೆಯಾಗಿಟ್ಟುಕೊಂಡು ಹೋರಾಟ ನಡೆಸುವುದರಿಂದ ಸಕ್ಕರೆ ಕಾರ್ಖಾನೆಗಳ ಆದಾಯ ಹೆಚ್ಚಾಗಬಹುದು. ಆದರೆ, ರೈತನಿಗೆ ನೇರವಾಗಿ ಹೆಚ್ಚಿನ ಬೆಲೆ ಸಿಗುವುದೆಂಬ ಖಾತ್ರಿ ಇರುವುದಿಲ್ಲ. ಅದಕ್ಕಾಗಿ ಎಫ್‌ಆರ್‌ಪಿ ಮತ್ತು ಎಸ್‌ಎಪಿ ಬೆಲೆಗಳಿಗೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಪ್ರತಿ ಟನ್ ಕಬ್ಬಿಗೆ ರೈತರಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿವೆ. ಆದರೆ, ಕರ್ನಾಟಕದಲ್ಲಿ ರೈತರು ಹೋರಾಟ ಮಾಡಿದ್ದಕ್ಕಾಗಿ ಒಂದು ವರ್ಷಕ್ಕೆ ೫೦ ರು. ಪ್ರೋತ್ಸಾಹ ಧನ ನೀಡಿ ಈ ಬಾರಿ ಮೌನ ವಹಿಸಿದೆ. ಅದೇ ಪಂಜಾಬ್‌ನಲ್ಲಿ ಪ್ರತಿ ಟನ್‌ಗೆ ೬೧೦ ರು., ಹರಿಯಾಣದಲ್ಲಿ ೪೫೦ ರು., ಉತ್ತರ ಪ್ರದೇಶದಲ್ಲಿ ೪೫೦ ರು., ಉತ್ತರಖಂಡ್‌ನಲ್ಲಿ ೫೦೦ ರು. ಪಕ್ಕದ ತಮಿಳುನಾಡಿನಲ್ಲಿ ೭೦೯ ರು. ಹಣವನ್ನು ನೀಡುತ್ತಿವೆ ಎಂದು ವಿವರಿಸಿದರು.

ಕರ್ನಾಟಕ ಆರ್ಥಿಕವಾಗಿ ಜಿಡಿಪಿಯಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ತೆರಿಗೆ ಸಂಗ್ರಹದಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೂ ಹಿಂದೆ ರೈತರಿಗೆ ನೀಡುತ್ತಿದ್ದ ಅನೇಕ ಸವಲತ್ತುಗಳನ್ನು ತೆಗೆದುಹಾಕಿದ್ದಲ್ಲದೆ ರೈತರ ಕಬ್ಬಿಗೆ ಪ್ರೋತ್ಸಾಹಧನವನ್ನು ಸಹ ನೀಡುತ್ತಿಲ್ಲ. ರೈತ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ರೈತರನ್ನೇ ಕಡೆಗಣಿಸುತ್ತಿರುವುದು ರೈತರಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.

ಸಕ್ಕರೆ ಕಾರ್ಖಾನೆಗಳು ಸಕ್ಕರೆಯ ಜೊತೆಗೆ ಎಥೆನಾಲ್, ಬಗಾಸ್‌ನಿಂದ ವಿದ್ಯುತ್, ಪ್ರೆಸ್‌ಮಡ್‌ನಿಂದ ಗೊಬ್ಬರ ಮುಂತಾದ ಉಪ ಉತ್ಪನ್ನಗಳಿಂದಲೂ ಆದಾಯ ಗಳಿಸುತ್ತಿವೆ. ಇವುಗಳ ಉತ್ಪಾದನಾ ವೆಚ್ಚಗಳಿದ್ದರೂ ಕಾರ್ಖಾನೆಗಳ ಒಟ್ಟು ಆರ್ಥಿಕ ಸ್ಥಿತಿಯನ್ನು ಪರಿಶೀಲಿಸುವಾಗ ಉಪ ಉತ್ಪನ್ನಗಳ ಆದಾಯವನ್ನೂ ಪರಿಗಣಿಸಬೇಕು. ಸಕ್ಕರೆ ಕಂಪನಿಗಳು ತಮ್ಮ ಉದ್ಯಮದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರದ ಎದುರು ಬೇಡಿಕೆಗಳನ್ನು ಮಂಡಿಸುತ್ತವೆ. ಹಾಗೆಯೇ ರೈತರು ತಮ್ಮ ಹಿತ ಕಾಪಾಡಿಕೊಳ್ಳಲು ಸರ್ಕಾರದ ಮುಂದಿಡುವ ಬೇಡಿಕೆಗಳಿಗೂ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಕಬ್ಬು ಬೆಳೆಯಲು ರೈತನಿಗೆ ತಗುಲುವ ಒಟ್ಟು ಉತ್ಪಾದನಾ ವೆಚ್ಚವನ್ನು ಭರಿಸಿ ನ್ಯಾಯಯುತ ಲಾಭ ಗಳಿಸುವಷ್ಟು ಬೆಲೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ರೈತರ ನೈಜ ಉತ್ಪಾದನಾ ವೆಚ್ಚ, ಲಾಭದ ಅಗತ್ಯವನ್ನು ಸಮರ್ಪಕವಾಗಿ ಪ್ರತಿಬಿಂಬಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಕಬ್ಬು ಬೆಳೆಗಾರರು ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅವರ ಕಳವಳಗಳನ್ನು ಪರಿಹರಿಸಲು ಕ್ರಮಗಳನ್ನು ಶಿಫಾರಸು ಮಾಡಲು ಭಾರತ ಸರ್ಕಾರವು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ.ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿರುವುದು ಉತ್ತಮ ಬೆಳವಣಿಗೆ. ಕಬ್ಬಿನ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಎಫ್‌ಆರ್‌ಪಿಯನ್ನು ಹೆಚ್ಚಿಸುವುದು, ರಾಜ್ಯಸರ್ಕಾರ ಕಬ್ಬಿಗೆ ಉತ್ತಮ ಸಲಹಾ ಬೆಲೆಯನ್ನು ಕೊಡುವುದರತ್ತ ರೈತರ ಹೋರಾಟ ಸಾಗಿದರೆ ಕಬ್ಬು ಬೆಳೆದ ರೈತರಿಗೆ ನ್ಯಾಯಸಮ್ಮತ ಆದಾಯ, ಕೃಷಿಗೆ ಭದ್ರತೆ, ರೈತರ ಕುಟುಂಬಕ್ಕೆ ಗೌರವಯುತ ಬದುಕು ದೊರಕಿದಂತಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿ.ಪಿ.ಅಪ್ಪಾಜಿ, ನರಸಿಂಹನ್, ಶಿವಣ್ಣ, ಜಯರಾಮ್, ರಾಘವೇಂದ್ರ, ಜೋಗಿಗೌಡ, ಸ್ವಾಮಿ ಇದ್ದರು.