ಲೋಡ್ ಶೆಡ್ಡಿಂಗ್ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ

| Published : Jul 10 2025, 12:45 AM IST

ಸಾರಾಂಶ

ಉಚಿತ ವಿದ್ಯುತ್ ನೀಡುತ್ತೇವೆಂದು ಹೇಳಿದ ಸರ್ಕಾರ ಈಗ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ವಿತರಣೆ ಮಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ತಾಸು ವಿದ್ಯುತ್ ನೀಡಬೇಕು ಹಾಗೂ ಅನಿಯಮಿತ ಲೋಡ್ ಶೆಡ್ಡಿಂಗ್ ಅನ್ನು ತಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿ ನಗರದ ಬೆಸ್ಕಾಂ ಕಚೇರಿ ಮುಂದೆ ಬುಧವಾರ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ರೈತರ ಜತೆ ವಿದ್ಯುತ್ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದು ಉಚಿತ ವಿದ್ಯುತ್ ನೀಡುತ್ತೇವೆಂದು ಹೇಳಿದ ಸರ್ಕಾರ ಈಗ ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ವಿತರಣೆ ಮಾಡುತ್ತಿಲ್ಲ. ದಿನದಲ್ಲಿ ಒಂದರಿಂದ ಎರಡು ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿ, ಕೆರೆ ಮೂಲದ ನೀರಿನ ಸೌಕರ್ಯವಿಲ್ಲದ ಕಾರಣ ಕೊಳವೆಭಾವಿ ನೀರಿನಿಂದ ಎಲ್ಲರೂ ಕೃಷಿ ಮಾಡುತ್ತಿದ್ದಾರೆ. ಕೊಳವೆ ಬಾವಿಗೆ ವಿದ್ಯುತ್ ಇಲ್ಲದಿದ್ದರೆ ನೀರು ಬರಲು ಸಾಧ್ಯವಾಗುವುದಿಲ್ಲ. ಈ ಸರ್ಕಾರ ಬಂದಾಗಿನಿಂದಲೂ ಪ್ರತಿದಿನ ಏಳು ಗಂಟೆ ವಿದ್ಯುತ್ ನೀಡುತ್ತೇವೆಂದು ಹೇಳಿ ದಿನಕ್ಕೆ ಎರಡು ತಾಸು ಕೂಡ ವಿದ್ಯುತ್ ವಿತರಿಸುತ್ತಿಲ್ಲ.

ಇದರಿಂದ ಕೃಷಿ ಬೆಳೆಗಳು ಈ ಬಾಗದ ಬಹುತೇಕ ಅಡಿಕೆ ಬೆಳೆಗೆ ನೀರಿನ ಅಭಾವ ಉಂಟಾಗಿದೆ. ಈಗಾಗಲೇ ಮಳೆ ಕೊರತೆಯಾಗಿದ್ದು ಪ್ರತಿದಿನ ಗ್ರಾಮಗಳಲ್ಲಿ ನಿರಂತರವಾಗಿ ವಿದ್ಯುತ್ ನೀಡಬೇಕಾಗಿದ್ದರೂ ದಿನಕ್ಕೆ ಕನಿಷ್ಠ ಎಂಟರಿಂದ ಹತ್ತು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ನಗರದಲ್ಲಿ ನೇಕಾರರಿಗೆ ಮಗ್ಗದ ಕೆಲಸಕ್ಕೆ ಸಮಸ್ಯೆಯಾಗಿದೆ, ವಿದ್ಯಾರ್ಥಿಗಳಿಗೆ, ನಗರದ ಬಹುತೇಕ ವ್ಯಾಪಾರ ವಹಿವಾಟುಗಳಿಗೆ ಹಾಗೂ ಕೃಷಿಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಈ ಕೂಡಲೇ ಕಡ್ಡಾಯವಾಗಿ ಪಂಸ್ ಸೆಟ್ ಗಳಿಗೆ ಏಳು ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ನೀಡಬೇಕು. ಅಲ್ಲದೆ ಗ್ರಾಮಗಳಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ತೋಟದ ಮನೆಗೆ ನಿರಂತರ ವಿದ್ಯುತ್ ನೀಡಬೇಕು ಎಂದರು.

ಈಗಾಗಲೇ ಅನೇಕ ಬಾರಿ ದೊಡ್ಡಬಳ್ಳಾಪುರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮನವಿ ನೀಡಿದ್ದರೂ ನೆಲಮಂಗಲದಲ್ಲಿರುವ ಮುಖ್ಯ ಕಚೇರಿ ಅಧಿಕಾರಿಗಳು ಬರಬೇಕೆಂದು ಹೇಳಿ ಇಲ್ಲಿರುವ ಸಿಬ್ಬಂದಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ನಿರಂತರವಾಗಿ ವಿದ್ಯುತ್ ನೀಡಿದರೆ ಮಾತ್ರ ಪ್ರತಿಭಟನೆ ನಿಲ್ಲಿಸಲಾಗುತ್ತದೆ ಇಲ್ಲದಿದ್ದರೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪರಿವಿಕ್ಷಣಾ ಮಂದಿರದಿಂದ ಬೆಸ್ಕಾಂ ಕಚೇರಿವರೆಗೆ ನೂರಾರು ರೈತರು ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು. ಕೆಪಿಟಿಸಿಲ್ ಇಂಜಿನಿಯರ್ ಲಕ್ಷ್ಮಣ್ ರೈತರ ಮನವಿ ಸ್ವೀಕರಿಸಿ ಒಂದು ವಾರ ಸಮಯಾವಕಾಶ ನೀಡಿ. ಮುಂದೆ ರಾತ್ರಿ 3 ತಾಸು ಹಾಗೂ ಹಗಲು 3 ತಾಸು ವಿದ್ಯುತ್ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘಗಳು ರೈತ ಮುಖಂಡರು ತಾಲೂಕಿನ ರೈತರು ಭಾಗವಹಿಸಿದ್ದರು.

ಫೋಟೋ-

9ಕೆಡಿಬಿಪಿ2- ಅನಿಯಮಿತ ಲೋಡ್‌ ಶೆಡ್ಡಿಂಗ್‌ ರದ್ದತಿಗೆ ಒತ್ತಾಯಿಸಿ ದೊಡ್ಡಬಳ್ಳಾಪುರದಲ್ಲಿ ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.