ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ತಡೆದು, ರಸ್ತೆ ತಡೆ ನಡೆಸುತ್ತಿದ್ದ ರೈತರ ಬಳಿ ಮನವಿ ಪತ್ರ ಸ್ವೀಕರಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ಕೃಷಿ ಸಾಲ ಮನ್ನಾ ಸೇರಿ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ತಾಲೂಕಿನ ಗಣಂಗೂರು ಸಮೀಪದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗೆ ಮುತ್ತಿಗೆ ಹಾಕಿ ವಾಹನಗಳ ಸಂಚಾರ ತಡೆದು ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ರೈತ ಸಂಘವನ್ನು ಬೆಂಬಲಿಸಿ ವಿವಿಧ ಸಂಘಟನೆಗಳ ಮುಖಂಡರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿದರು.

ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ದರ ನಿಗದಿ, ಪ್ರತಿಯೊಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದರು ಜೊತೆಗೆ ತೀವ್ರ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲವನ್ನು ಕೂಡಲೇ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ತೀವ್ರತೆ ಗಮನಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಣಂಗೂರು ಟೋಲ್ ಸುತ್ತಮುತ್ತ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ, ಬಿಗಿ ಭದ್ರತೆ ಒದಗಿಸಿದ್ದರು.

ಬೆಳಗ್ಗೆಯೇ ಟೋಲ್ ಮುತ್ತಿಗೆ ಹಾಕಲು ಮುಂದಾದ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಬೋರಲಿಂಗಯ್ಯ ಅವರು ರೈತರೊಂದಿಗೆ ಮಾತುಕತೆ ನಡೆಸಿ ಹೈವೇ ರಸ್ತೆ ಮಾತ್ರ ತಡೆ ಮಾಡಿ ಹೆದ್ದಾರಿಯ ಸರ್ವೀಸ್ ರಸ್ತೆಗಳನ್ನು ತಡೆಯದಂತೆ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ಪ್ರತಿಭಟನಾಕಾರರು ಸರ್ವೀಸ್ ರಸ್ತೆ ಹಾಗೂ ಹೈವೇ ಸಂಪೂರ್ಣ ಬಂದ್ ಮಾಡಿ ರಸ್ತೆಯಲ್ಲಿ ಕುಳಿತು ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಮ್ಮ ವಾಹನದಲ್ಲಿನ ಧ್ವನಿವರ್ಧಕದ ಮೂಲಕ ರೈತರನ್ನು ಸಮಾಧಾನಪಡಿಸಲು ಮುಂದಾದರು. ಸಚಿವರು ಸ್ಥಳಕ್ಕೆ ಆಗಮಿಸಿ ಅವರ ಮಾತುಗಳನ್ನು ಆಲಿಸಿ ಪರಿಹಾರವೇನು ಎಂಬುದನ್ನು ನೋಡೋಣ, ಅಲ್ಲಿಯವರೆಗೆ ಶಾಂತಿಯುತ ಹೋರಾಟ ನಡೆಸೋಣ ಎಂದು ಪ್ರತಿಭಟನಕಾರರಿಗೆ ಮನವಿ ಮಾಡಿದರು. ಆದರೆ ಆಕ್ರೋಶಗೊಂಡ ರೈತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪೊಲೀಸರ ಮನವಿಯನ್ನು ಲೆಕ್ಕಿಸದೆ ಬ್ಯಾರಿಕೇಡ್ ಹಾಗೂ ತಂತಿ ಬೇಲಿಗಳನ್ನು ಮುರಿದುಕೊಂಡು ಏಕಾಏಕಿ ಹೆದ್ದಾರಿಗೆ ನುಗ್ಗಿ ಟೋಲ್ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.

ಇದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತು. ಎರಡು ಬದಿಯ ವಾಹನಗಳು ತಡೆಯಾದ್ದರಿಂದ ಕಿಲೋ ಮೀಟರ್ ಗಳ ಉದ್ದಕ್ಕೂ ವಾಹನಗಳು ಜಮಾವಣೆಗೊಂಡಿದ್ದವು.

ಸ್ಥಳಕ್ಕೆ ಸಚಿವ ಎನ್ ಚಲುವರಾಯಸ್ವಾಮಿ, ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿ ಇತರೆ ಅಧಿಕಾರಿಗಳು ಆಗಮಿಸಿ ರೈತರನ್ನು ಸಮಾಧಾನ ಪಡಿಸಿ ಮಾತನಾಡಿದರು.

ಸಚಿವರ ಭರವಸೆ, ಪ್ರತಿಭಟನೆ ಹಿಂಪಡೆದ ರೈತರು:

ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ತಡೆದು, ರಸ್ತೆ ತಡೆ ನಡೆಸುತ್ತಿದ್ದ ರೈತರ ಬಳಿ ಮನವಿ ಪತ್ರ ಸ್ವೀಕರಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಕಬ್ಬಿಗೆ ಸೂಕ್ತ ಬೆಲೆ ನಿಗದಿ, ಕೃಷಿ ಸಾಲ ಮನ್ನಾ ಸೇರಿದಂತೆ ಇತರೆ ಬೇಡಿಕೆಗಳಿಗೆ ಒತ್ತಾಯಿಸಿ ರೈತರು ಗಣಂಗೂರು ಟೋಲ್ ಬಳಿ ನಡೆಸುತ್ತಿದ್ದ ಪ್ರತಿಭಟನೆಗೆ ವಕೀಲರ ಸಂಘದ ಸದಸ್ಯರು ಸಭೆ ನಡೆಸಿ ಕಲಾಪದಿಂದ ದೂರ ಉಳಿಯುವಂತೆ ತೀರ್ಮಾನಿಸಿ, ಕಲಾಪದಿಂದ ದೂರ ಉಳಿಯುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.