ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾವೇರಿ ಜಿಲ್ಲೆ ಹಾಗೂ ವಿವಿಧ ರೈತ ಸಂಘಟನೆಗಳು ಶಿಗ್ಗಾಂವಿ ತಾಲೂಕು ಬಂಕಾಪುರ ಬಳಿಯ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಬಂಕಾಪುರ: ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾವೇರಿ ಜಿಲ್ಲೆ ಹಾಗೂ ವಿವಿಧ ರೈತ ಸಂಘಟನೆಗಳು ಶಿಗ್ಗಾಂವಿ ತಾಲೂಕು ಬಂಕಾಪುರ ಬಳಿಯ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗ್ಗೆ 11 ಗಂಟೆಗೆ ದುರ್ಗಾಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಪತಿಭಟನೆ ಪ್ರಾರಂಭ ಮಾಡಿದರು. ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯದ ರೈತ ಮುಖಂಡರುಗಳನ್ನು ದೆಹಲಿಗೆ ಕರೆಸಿಕೊಂಡು ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡದೇ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ರೈತರು ಹಿಡಿಶಾಪ ಹಾಕಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳ ಕೂಗುವ ಮೂಲಕ ಕೆಲವು ರೈತರು ಬಾರಕೋಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಕೈಯಲ್ಲಿನ ಪ್ರತಿಕೃತಿಯನ್ನು ಪೊಲೀಸರು ಕಸಿದುಕೊಂಡು ಅವರಿಗೆ ಸಿಗದಂತೆ ದೂರ ಒಯ್ದು ಬಿಸಾಕಿದರು. ಎರಡನೇ ಭಾರಿ ಇದೇ ತರಹದ ಪ್ರತಿಕೃತಿ ತಯಾರಿಸಿಕೊಂಡು ಬಂದಾಗ ಪೊಲೀಸರು ಮತ್ತೆ ಅದನ್ನು ತಡೆಯಲು ಯತ್ನಿಸಿ ತೆಗೆದುಕೊಂಡು ಹೋದಾಗ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ಉಂಟಾಗಿ ಮಾತಿನ ಚಕಮಕಿ ನಡೆಯಿತು.
ಬಂಕಾಪುರ ಟೋಲ್ ನಾಕಾ ಬಳಿ ಎತ್ತು ಮತ್ತು ಚಕ್ಕಡಿಯನ್ನು ನಿಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡುವೆಯೂ ಆಂಬ್ಯುಲೆನ್ಸ್‌ಗಳಿಗೆ ಅಡ್ಡಿಪಡಿಸದೇ ಓಡಾಡಲು ಅವಕಾಶ ಮಾಡಿಕೊಡುವ ಮುಖಾಂತರ ರೈತರು ಮಾನವೀಯತೆ ಮೆರೆದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸವಣೂರ ಉಪವಿಭಾಗಾಧಿಕಾರಿ ಸಮೀರ್ ಪ್ರಕಾಶ ಖೋಡೆ ಇವರು ಪ್ರತಿಭಟನಾಕಾರರಿಗೆ ಮನವೊಲಿಸಲು ಪ್ರಯತ್ನಿಸಿದಾಗ ತಮ್ಮ ಪ್ರಯತ್ನ ವಿಫಲವಾದದ್ದನ್ನು ಕಂಡು ಶಾಂತರೀತಿಯಿಂದ ಪ್ರತಿಭಟನೆ ನಡೆಸುವಂತೆ ತಿಳಿಸಿ ನಡೆದರು.ರಾಷ್ಟ್ರೀಯ ಹೆದ್ದಾರಿಯ ತಡೆ ಸಿದ್ದತೆ ಅರಿತ ಜಿಲ್ಲಾ ಪೊಲೀಸರು ವಾಹನಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಪ್ರತಿಭಟನಾ ಸ್ಥಳದಲ್ಲಿ 600 ಪೊಲೀಸ್ ಸಿಬ್ಬಂದಿಯನ್ನು ಸೂಕ್ತ ಬಂದೋಬಸ್ತ್‌ಗಾಗಿ ನೇಮಿಸಿದ್ದರು. ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ 1 ಆಂಬ್ಯುಲೆನ್ಸ್ ಹಾಗೂ 1 ಅಗ್ನಿಶಾಮಕ ದಳದ ವಾಹನವನ್ನು ನಿಯೋಜಿಸಲಾಗಿತ್ತು.
ಪ್ರತಿಭಟನೆಯಲ್ಲಿ ರೈತಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಹನುಮಂತಣ್ಣ ಹುಚ್ಚಣ್ಣವರ, ಉಪಾಧ್ಯಕ್ಷರಾದ ಬಸಯ್ಯ ಬರಡಿ, ರುದ್ರಪ್ಪ ಬಳಿಗಾರ, ದೇವರಾಜ ದೊಡ್ಡಮನಿ, ಶಿವಾನಂದ ಜಡಿಮಠ, ಶಿವಣ್ಣ ಕಬ್ಬೂರ, ಬಸಲಿಂಗಪ್ಪ ನರಗುಂದ, ಈರಣ್ಣ ಸೋಮಗೊಂಡ, ದೇವಣ್ಣ ಹಳವಳ್ಳಿ, ಕರೆಪ್ಪ ಹಳ್ಳದ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ ಹಾಗೂ ಶಿಗ್ಗಾಂವಿ, ರಾಣಿಬೆನ್ನೂರ, ಸವಣೂರ, ಹಾನಗಲ್ಲ ತಾಲೂಕಿನ ರೈತ ಮುಖಂಡರು ಪಾಲ್ಗೊಂಡಿದ್ದರು.ರೈತರ ಹಿತ ಕಾಯುವ ಕೆಲ್ಸ ಮಾಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಕ್ಕರೆ ಖಾತೆ ಸಚಿವರು ತಮ್ಮ ಸ್ಥಾನವನ್ನು ಕೇವಲ 6 ದಿನ ನಮ್ಮ ರೈತರಿಗೆ ಬಿಟ್ಟುಕೊಡಲಿ. ನಾವೇ ನಮ್ಮ ರೈತರಿಗೆ 5 ಸಾವಿರ ಅಲ್ಲ, ₹ 6 ಸಾವಿರ ಒಂದು ಟನ್ ಕಬ್ಬಿಗೆ ಬೆಂಬಲ ಬೆಲೆ ಕೊಡುತ್ತೇವೆ. ನಿಭಾಯಿಸಲು ಆಗದಿದ್ದರೆ ಆ ಖಾತೆ ನಿಮಗೆ ಸೂಕ್ತವಲ್ಲ. ಮೊದಲು ರೈತರ ಹಿತ ಕಾಯುವ ಕಾರ್ಯ ಮಾಡಿ, ದೇಶಕ್ಕೆ ಅನ್ನ ಕೊಡುವ ರೈತನ ಗೋಳನ್ನು ಕೇಳಿ, ರೈತರು ಆಕ್ರೋಶ ವ್ಯಕ್ತಪಡಿಸಿದರು.ಪರಿತಪಿಸಿದ ಪ್ರಯಾಣಿಕರು: ರೈತರು ಬಂಕಾಪುರ ಟೋಲ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಬಸ್ ಹಾಗೂ ವಿವಿಧ ವಾಹನ ಸವಾರರು ತೀವ್ರ ತೊಂದರೆಯನ್ನು ಅನುಭವಿಸುವಂತಾಯಿತು. ಬಸ್‌ಗಳು ಬಂದರೂ ಹೆದ್ದಾರಿ ಬಂದ್ ಇದ್ದುದರಿಂದ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಊರುಗಳಿಗೆ ಹೋಗದೇ ಪರಿತಪಿಸುತ್ತಿರುವುದು ಕಂಡುಬಂದಿತು.