‘ಭಾರತ್‌ ಬಂದ್‌’ ಬೆಂಬಲಿಸಿ ಇಂದು ರೈತರಿಂದ ರಸ್ತೆ ತಡೆ;ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಗಾಗಿ ಹೋರಾಟ

| Published : Feb 16 2024, 01:55 AM IST / Updated: Feb 16 2024, 03:16 PM IST

ಕುರುಬೂರು ಶಾಂತಕುಮಾರ್‌
‘ಭಾರತ್‌ ಬಂದ್‌’ ಬೆಂಬಲಿಸಿ ಇಂದು ರೈತರಿಂದ ರಸ್ತೆ ತಡೆ;ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆಗಾಗಿ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕನಿಷ್ಠ ಬೆಂಬಲ ಬೆಲೆ (ಎಂಎಸ್​​ಪಿ) ಕಾನೂನನ್ನು ಸಮಗ್ರವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿ ರಾಷ್ಟ್ರೀಯ ರೈತ ಸಂಘಟನೆಗಳು ಫೆ.16ಕ್ಕೆ ಕರೆ ನೀಡಿರುವ ಭಾರತ್‌ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕದ ರೈತ ಸಂಘಟನೆಗಳು ರಸ್ತೆ ತಡೆ ನಡೆಸಲು ತೀರ್ಮಾನಿಸಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನಿಷ್ಠ ಬೆಂಬಲ ಬೆಲೆ (ಎಂಎಸ್​​ಪಿ) ಕಾನೂನನ್ನು ಸಮಗ್ರವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿ ರಾಷ್ಟ್ರೀಯ ರೈತ ಸಂಘಟನೆಗಳು ಫೆ.16ಕ್ಕೆ ಕರೆ ನೀಡಿರುವ ಭಾರತ್‌ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕರ್ನಾಟಕದ ರೈತ ಸಂಘಟನೆಗಳು ರಸ್ತೆ ತಡೆ ನಡೆಸಲು ತೀರ್ಮಾನಿಸಿವೆ.

ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರಪ್ರದೇಶ, ಹರಿಯಾಣ, ಪಂಜಾಬ್​ನ ರೈತರು ದೆಹಲಿಯಲ್ಲಿ ಬೃಹತ್‌ ಹೋರಾಟ ನಡೆಸುತ್ತಿದ್ದಾರೆ. 

ಈ ರೈತ ಸಂಘಟನೆಗಳು ಫೆ.16ರಂದು ಭಾರತ್‌ಬಂದ್‌ಗೆ ಕರೆ ನೀಡಿದ್ದು, ಕರ್ನಾಟಕದಲ್ಲಿಯೂ ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಹಳ್ಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ರೈತರು ರಸ್ತೆ ತಡೆ ನಡೆಸಿ ಈ ಹೋರಾಟಕ್ಕೆ ಬೆಂಬಲಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ(ರಾಜಕೀಯೇತರ) ದಕ್ಷಿಣ ಭಾರತ ಸಂಚಾಲಕ ಮತ್ತು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದ್ದಾರೆ.

ರೈತರ ಶಾಂತಿಯುತ ಹೋರಾಟದ ಮೇಲೆ ದಾಳಿ ಮಾಡಲು ಪೊಲೀಸರು ಮತ್ತು ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದು ಸರ್ಕಾರ ರೈತರ ಆಂದೋಲನ ದಮನ ಮಾಡುವ ಕಾರ್ಯವಾಗಿದೆ. ಇಂತಹ ಕೆಟ್ಟ ನೀತಿಗಳಿಂದ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರತಿಯೊಂದು ವರ್ಗದ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ನಿರ್ದಿಷ್ಟ ಬೇಡಿಕೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.

ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಗಡಿಯಲ್ಲಿನ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ರೈತರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು. 

ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಯಾವುದೇ ದಾಳಿಯನ್ನು ರೈತ ಆಂದೋಲನವು ವಿರೋಧಿಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. 

ರೈತರ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರ ದುರ್ಬಳಕೆ ಮಾಡಿಕೊಂಡು, ರೈತರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಅಶ್ರುವಾಯು ಸಿಡಿತ ಮತ್ತು ಸಾಮೂಹಿಕ ಬಂಧನವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.