ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟಿಸಿದರು.ಪಟ್ಟಣದ ಕುವೆಂಪು ವೃತ್ತದ ಹೆದ್ದಾರಿ ಬಳಿ ಸಮಿತಿಯ ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ, ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತರು ಒಣಗಿದ ಕಬ್ಬು ಹಿಡಿದು ಸೇರಿದರು. ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಬ್ಬು ಸೇರಿದಂತೆ ದೀರ್ಘಾವಧಿ ಬೆಳೆಗಳು ಸಂಪೂರ್ಣವಾಗಿ ಒಣಗಿ ರೈತರನ್ನ ಕಂಗಾಲಾಗುವಂತೆ ಮಾಡಿದೆ. ಅಲ್ಲದೇ, ಕೆಆರ್‌ಎಸ್ ಜಲಾಶಯದಲ್ಲಿ 80 ಅಡಿ ನೀರಿದ್ದರೂ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸದ ಕಾರಣ ಕಬ್ಬು ಬಾಡಿ ಹೋಗುತ್ತಿದೆ. ಒಂದು ಕಟ್ಟು ನೀರು ಹರಿಸಿದರೆ ಇರುವ ಬೆಳೆಗಳು ಉಳಿಸಿಕೊಳ್ಳಬಹುದು. ಈಬಗ್ಗೆ ಪ್ರತಿಭಟನೆ ನಡೆಸಿ, ತಾಲೂಕು ಆಡಳಿತದ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳ ವಸ್ತು ಸ್ಥಿತಿ ಪರಿಶೀಲೀಸಿ ನಾಲೆಗಳಿಗೆ ನೀರುಹರಿಸುವಂತೆ ಒತ್ತಾಯ ಮಾಡಿದರು.ನಂತರ ಬಿ.ಸಿ.ಕೃಷ್ಣೇಗೌಡ ಮಾತನಾಡಿ, ನೀರಿನ ಸಮಸ್ಯೆ ಕುರಿತು ಈ ಗಾಗಲೇ ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ರೈತರು ರಸ್ತೆಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಮಳೆ ಇಲ್ಲದೆ ಬಿಸಿಲ ಬೇಗೆಗೆ ಕಬ್ಬು, ಅಡಿಕೆ, ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ. ಒಂದು ವೇಳೆ ನಾಲೆಗಳಿಗೆ ಶೀಗ್ರ ನೀರು ಹರಿಸದಿದ್ದರೆ ಕೆಆರೆಸ್ ಜಲಾಶಯಕ್ಕೆ ಮುತ್ತಿಗೆ ಹಾಕಿ ಉಘ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಸಮಿತಿ ಸದಸ್ಯರಾದ ಹುಂಡವಾಡಿ ಮಹದೇವು, ಮಹದೇವಪುರ ಕೃಷ್ಣ, ದೊಡ್ಡಪಾಳ್ಯ ಮಹೇಶ್, ರಾಮಚಂದ್ರು, ರವಿಲಕ್ಷ್ಮಣ, ಕೃಷ್ಣೇಗೌಡ, ಶ್ರೀನಿವಾಸು, ಕೆಂಪೇಗೌಡ, ಮೇಳಾಪುರ ಶಿವಣ್ಣ, ಜಯರಾಮು ಸೇರಿದಂತೆ ರೈತರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.