7 ಗಂಟೆ ನಿರಂತರ ತ್ರಿಫೇಸ್‌ ವಿದ್ಯುತ್‌ಗೆ ಆಗ್ರಹಿಸಿ ರೈತರಿಂದ ರಸ್ತೆ ತಡೆ

| Published : Oct 08 2023, 12:02 AM IST

7 ಗಂಟೆ ನಿರಂತರ ತ್ರಿಫೇಸ್‌ ವಿದ್ಯುತ್‌ಗೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನಲ್ಲಿ ಎರಡು ದಿನಗಳಿಂದ ವಿದ್ಯುತ್‌ ಕಟ್‌ ಮಾಡುತ್ತಿದ್ದು, ಹಿಂದಿನಂತೆಯೇ ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್‌ ಪೂರೈಸುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಎದುರಿನಲ್ಲಿ ರಸ್ತೆ ತಡೆ ನಡೆಸಿದರು.

ಮುಂಡರಗಿ ಹೆಸ್ಕಾಂ ಕಚೇರಿ ಎದುರು ವಿವಿಧ ಗ್ರಾಮಗಳ ರೈತರ ಆಕ್ರೋಶ

ಮುಂಡರಗಿ: ಕಳೆದ 1-2 ದಿನಗಳಿಂದ ರೈತರ ಪಂಪ್‌ಸೆಟ್ ಗಳಿಗೆ ಸಂಪೂರ್ಣವಾಗಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದು, ಮೊದಲೇ ಮಳೆ ಇಲ್ಲದಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ವಿದ್ಯುತ್ ಮೇಲೆ ಅವಲಂಬಿತರಾಗಿ ಕೃಷಿಗೆ ಮುಂದಾಗಿದ್ದು, ಮೊದಲಿನಂತೆ ನಮಗೆ ನಿರಂತರವಾಗಿ ದಿನಕ್ಕೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶನಿವಾರ ಹೆಸ್ಕಾಂ ಕಚೇರಿಗೆ ಮುಂದೆ ರಸ್ತೆ ತಡೆ ನಡೆಸಿದರು.

ನಾವು ಎಲ್ಲ ರೈತರೂ ವಿದ್ಯುತ್ ನಂಬಿಯೇ ಕೃಷಿಗೆ ಮುಂದಾಗಿದ್ದು, ಸರ್ಕಾರ ಇದ್ದಕ್ಕಿದ್ದಂತೆ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಿದ್ದು, ಇದು ಹೀಗೆ ನಿರಂತರವಾಗಿ ಮುಂದುವರೆದಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಈಗಾಗಲೇ ಬರಗಾಲದ ಬೇಗೆಯಲ್ಲಿ ಸಿಲುಕಿದ ನಾವುಗಳು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಈ ದಿಢೀರ್ ಪ್ರತಿಭಟನೆಗೆ ಮುಂದಾಗಿರುವುದಾಗಿ ಪ್ರತಿಭಟನಾ ನಿರತ ರೈತರು ತಿಳಿಸಿದರು.

ಈ ಸಂದರ್ಭದಲ್ಲಿ ಮುಂಡರಗಿ ಹೆಸ್ಕಾ ಎಇಇ ಚೆನ್ನಪ್ಪ ಲಮಾಣಿ ರೈತರೊಂದಿಗೆ ಮಾತುಕತೆಗೆ ಮುಂದಾದಾಗ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಬಂದು ನಮಗೆ ಈ ಹಿಂದಿನಂತೆ ನಿರಂತರವಾಗಿ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವ ಭರವಸೆ ನೀಡುವವರೆಗೂ ನಾವು ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟ ಹಿಡಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹೆಸ್ಕಾ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಕಲ್ಯಾಣಶೆಟ್ಟಿ, ಆಗಮಿಸಿದಾಗ ರೈತ ಮುಖಂಡರಾದ ವೀರನಗೌಡ ಪಾಟೀಲ, ಶಿವಾನಂದ ಇಟಗಿ ಮಾತನಾಡಿ, ಇಲ್ಲಿಯೇ ನಮ್ಮ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈಗಲೂ ರೈತರ ಪಂಪ್ ಸೆಟ್ ಗಳಿಗೆ ನಿರಂತರವಾಗಿ 7 ತಾಸು ತ್ರಿಫೇಸ್ ವಿದ್ಯುತ್ ನೀಡುತ್ತಿದ್ದಾರೆ. ನಮ್ಮದು ಅತೀ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದ್ದು, ನಮ್ಮಲ್ಲಿಯೇ ಈ ರೀತಿ ಸಮಸ್ಯೆಯಾದರೆ ಹೇಗೆ ? ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಅತೀ ಹೆಚ್ಚಿನ ಬರವನ್ನು ಅನುಭವಿಸುತ್ತಿದ್ದರೂ ಸಹ ಸರ್ಕಾರ ಮುಂಡರಗಿಯನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿಲ್ಲ.

ಇದ್ದುದರಲ್ಲಿಯೇ ನೀರಾವರಿ ಮೂಲಕ ಒಂದು ಕೃಷಿ ಮಾಡುವ ಮೂಲಕ ಅನುಕೂಲ ಮಾಡಿಕೊಳ್ಳಬೇಕೆಂದರೆ ಕಳೆದ 2 ದಿನಗಳಿಂದ ರೈತರ ಪಂಪ್‌ಸೆಟ್‌ಗಳಿಗೆ ಸಂಪೂರ್ಣವಾಗಿ ವಿದ್ಯುತ್ ಕಡಿತಗೊಳಿಸಲಾಗಿದೆ. ಹೀಗಾದರೆ ನಾವು ಮುಂದೆ ಬದುಕು ನಡೆಸುವುದಾದರೂ ಹೇಗೆ ? ನಮಗೆ ಹಿಂದಿನಂತೆ ನಿರಂತರವಾಗಿ ನಿತ್ಯ 7 ತಾಸು ವಿದ್ಯುತ್ ನೀಡುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹೆಸ್ಕಾ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಕಲ್ಯಾಣಶೆಟ್ಟಿ, ಹುಬ್ಳಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ವಿದ್ಯುತ್ ಕೊರತೆ ಇರುವುದರಿಂದಾಗಿ ಈ ರೀತಿ ವ್ಯತ್ಯಾಸ ಆಗಿದೆ. ಶೀಘ್ರವೇ ಇದನ್ನು ಸರಿಪಡಿಸುವುದಾಗಿ ತಿಳಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ರೈತರು ನಮಗೆ ತ್ರಿಫೇಸ್ ವಿದ್ಯುತ್ ನೀಡುವವರೆಗೂ ನಾವು ಇಲ್ಲಿಂದ ಏಳುವುದಿಲ್ಲವೆಂದು ಪಟ್ಟ ಹಿಡಿದರು. ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾ ಹೆಸ್ಕಾ ಕಾರ್ಯನಿರ್ವಾಹಕ ಎಂಜಿನಿಯರ್ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ 3.5 ತಾಸು ನೀಡಿ ಸೋಮವಾರದಿಂದ ಹಿಂದಿನ ನಿಯಮದಂತೆ ನಿತ್ಯ 7 ಗಂಟೆ ತ್ರಿಫೇಸ್ ನೀಡುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದೆ ಪಡೆದುಕೊಂಡರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಾನಂದ ಇಟಗಿ, ಬಾಪೂಜಿ ಮಧ್ಯಪಾಟಿ, ಎಚ್.ಬಿ. ಕುರಿ, ಶರಣಪ್ಪ ಚೆನ್ನಳ್ಳಿ, ವಿಠಲ್ ಗಣಾಚಾರಿ, ಗರಡಪ್ಪ ಜಂತ್ಲಿ, ವೀರಣ್ಣ ಕವಲೂರು, ಎಂ.ಎಂ. ಕಾತರಕಿ, ಬೀರಪ್ಪ ದಂಡಿನ, ಶಿವಪುತ್ರಪ್ಪ ಪೂಜಾರ, ಫಕ್ಕೀರಪ್ಪ ಬಳ್ಳಾರಿ, ಚಂದ್ರಪ್ಪ ಗದ್ದಿ, ಪ್ರಕಾಶ ಅಬ್ಬೀಗೇರಿ, ಮಲ್ಲಪ್ಪ ದಳವಿ, ವಿಶ್ವನಾಥ ಡಂಬಳ, ಅನ್ನಪ್ಪ ಡಂಬಳ ಸೇರಿದಂತೆ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತರ ಪ್ರತಿಭಟನೆಯಿಂದಾಗಿ ಸುಮಾರು 3 ಗಂಟೆಗೂ ಹೆಚ್ಚುಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು.