ಸಾವಳಗಿ : ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ರೈತರು ಚಿಕ್ಕಲಕಿ ಕ್ರಾಸ್‌ನಲ್ಲಿ ಅಮರಣ ಉಪವಾಸ ಸತ್ಯಾಗ್ರಹವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭರವಸೆ ಹಿನ್ನೆಲೆ ರೈತರು ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸಾವಳಗಿ

ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಚಿಕ್ಕಲಕಿ–ತೊದಲಬಾಗಿ ಏತ ನೀರಾವರಿ ಯೋಜನೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ರೈತರು ಚಿಕ್ಕಲಕಿ ಕ್ರಾಸ್‌ನಲ್ಲಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ರೈತರ ಹೋರಾಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ರೈತರು ಸತ್ಯಾಗ್ರಹ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು, ಏತ ನೀರಾವರಿ ಯೋಜನೆಯ ನಕ್ಷೆಯು ದಲಿತರ ಕಾಲೋನಿಯ ಮೂಲಕ ಹಾದುಹೋಗುತ್ತಿರುವ ಹಿನ್ನೆಲೆಯಲ್ಲಿ ನಕ್ಷೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆಯೇ ಎಂಬ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಯೊಬ್ಬರನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಅಲ್ಲಿಂದ ಬರುವ ಆದೇಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ರಾಜಕೀಯ ಪಕ್ಷಪಾತವಿಲ್ಲದೆ ಮಾಜಿ ಶಾಸಕರು, ಹಾಲಿ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀಡಿದ ಭರವಸೆ ಹಿನ್ನೆಲೆ ರೈತರು ಅಮರಣ ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದಾರೆ. ಈ ವೇಳೆ

ಜಮಖಂಡಿ ಮತಕ್ಷೇತ್ರದ ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಕರ್, ಡಿವೈಎಸ್ಪಿ ರೋಷನ್ ಜಮೀರ್ ಸೇರಿದಂತೆ ಹಿರಿಯ ಅಧಿಕಾರಿಗಳು, ರೈತ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.