ಯೂರಿಯಾ ಗೊಬ್ಬರಕ್ಕಾಗಿ ಲಕ್ಷ್ಮೇಶ್ವರದ ಅಂಗಡಿ ಮುಂದೆ ರೈತರ ವಾಸ್ತವ್ಯ

| Published : Jul 26 2025, 01:30 AM IST

ಯೂರಿಯಾ ಗೊಬ್ಬರಕ್ಕಾಗಿ ಲಕ್ಷ್ಮೇಶ್ವರದ ಅಂಗಡಿ ಮುಂದೆ ರೈತರ ವಾಸ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ರೈತರು ಗೊಬ್ಬರ ಅಂಗಡಿಗಳ ಮುಂದೆ ಜಡಿ ಮಳೆಯನ್ನು ಲೆಕ್ಕಿಸದೆ ರಾತ್ರಿ ಇಡೀ ಟ್ರ್ಯಾಕ್ಟರ್‌ನಲ್ಲಿ ಮಲಗಿ ಕಾಯ್ದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.

ಲಕ್ಷ್ಮೇಶ್ವರ: ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ರೈತರು ಗೊಬ್ಬರ ಅಂಗಡಿಗಳ ಮುಂದೆ ಜಡಿ ಮಳೆಯನ್ನು ಲೆಕ್ಕಿಸದೆ ರಾತ್ರಿ ಇಡೀ ಟ್ರ್ಯಾಕ್ಟರ್‌ನಲ್ಲಿ ಮಲಗಿ ಕಾಯ್ದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು. ಅತಿಯಾದ ತೇವಾಂಶದಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಹೀಗಾಗಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೈತರು ಹಗಲು, ರಾತ್ರಿ ಗೊಬ್ಬರಕ್ಕಾಗಿ ಕಾಯುವಂತೆ ಮಾಡಿದೆ.

ಗುರುವಾರ ಬೆಳಗ್ಗೆ ಕೆಲ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದೊರೆಯುತ್ತಿರುವ ಮಾಹಿತಿ ಅರಿತ ರೈತರು ಟ್ರ್ಯಾಕ್ಟರ್‌ಗಳಲ್ಲಿ ಗೊಬ್ಬರಕ್ಕಾಗಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದಾರೆ. ಒಬ್ಬರಿಗೆ ಎರಡು ಚೀಲ ಮಾತ್ರ ಗೊಬ್ಬರ ಕೊಡುತ್ತಿರುವ ಅಂಗಡಿ ಮಾಲೀಕರು ಸಂಜೆವರೆಗೂ ಪೊಲೀಸರ ಕಾವಲಿನಲ್ಲಿ ವಿತರಣೆ ಮಾಡಿದ್ದಾರೆ. ಗೊಬ್ಬರ ದೊರೆಯದೆ ರೈತರು ಮೂರ್ನಾಲ್ಕು ದಿನಗಳಿಂದ ಗೊಬ್ಬರ ಅಂಗಡಿಗಳಿಗೆ ಅಲೆದಾಟ ನಡೆಸಿದ್ದಾರೆ. ಯೂರಿಯಾ ಗೊಬ್ಬರಕ್ಕಾಗಿ ನಸುಕಿನಿಂದಲೆ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ವೇಳೆಗೆ ಯೂರಿಯಾ ಪಡೆಯಲು ನೂಕು ನುಗ್ಗಲು ಉಂಟಾಗಿದ್ದರಿಂದ ಅಂಗಡಿಗಳ ಮಾಲೀಕರು ಉಳಿದ ಗೊಬ್ಬರವನ್ನು ನಾಳೆ ಶುಕ್ರವಾರ ವಿತರಣೆ ಮಾಡುವುದಾಗಿ ಹೇಳಿದ್ದರಿಂದ ಗೊಬ್ಬರ ದೊರೆಯದ ರೈತರು ರಾತ್ರಿಯಿಡಿ ಮಳೆಯನ್ನು ಲೆಕ್ಕಿಸದೆ ಕಾಯುತ್ತ ಕಳೆದ ಘಟನೆ ನಡೆದಿದೆ.

ಶುಕ್ರವಾರ ಬೆಳಗ್ಗೆ ಸರತಿ ಸಾಲಿನಲ್ಲಿ ನಿಂತ ನೂರಾರು ರೈತರು ಗೊಬ್ಬರ ಪಡೆದುಕೊಂಡು ತಮ್ಮ ಗ್ರಾಮಕ್ಕೆ ಮರಳಿದ ಘಟನೆ ಕಂಡು ಬಂದಿತು. ಗೊಬ್ಬರ ದೊರೆಯದ ರೈತರು ಶುಕ್ರವಾರವು ಗೊಬ್ಬರ ಅಂಗಡಿಗಳಿಗೆ ಬಂದು ಗೊಬ್ಬರಕ್ಕಾಗಿ ಎಡತಾಕುತ್ತಿರುವ ಸಂಗತಿಯು ಮಾಮೂಲಿಯಾಗಿತ್ತು.

ಸರ್ಕಾರದ ಈ ಅವ್ಯವಸ್ಥೆಯ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸುತ್ತಾ ಚನ್ನಪಟ್ಟಣ , ಮುನಿಯನ ತಾಂಡೆ ರೈತರು ಬೆಳಗ್ಗೆ ಬೇಗ ಗೊಬ್ಬರ ಸಿಗಲಿ ಅಂತಾ ಟ್ರ್ಯಾಕ್ಟರ್ ಸಮೇತ ಆಗಮಿಸಿ ಜಿಟಿ ಜಿಟಿ ಮಳೆಯಲ್ಲಿ ರಾತ್ರಿ ಪೂರ್ಣ ಊಟ ನಿದ್ದೆ ಇಲ್ಲದೇ ಟ್ರ್ಯಾಕ್ಟರ್‌ನಲ್ಲಿ ಕಾಲ ಕಳೆದು ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.

ಈ ಸಂದರ್ಭದಲ್ಲಿ ರವಿ ಹುರಕನವರ, ಸುರೇಶ ಮೋಟೆಬೆನ್ನೂರ, ಬಸಪ್ಪ ಮೋಟೆಬೆನ್ನೂರ, ಆನಂದ ಲಮಾಣಿ, ಪ್ರಕಾಶ ಲಮಾಣಿ, ದಸ್ತಗೀರಸಾಬ್ ಖವಾಸ, ಲಕ್ಷ್ಮೇಶ್ವರ, ಚೆನ್ನಪಟ್ಟಣ, ಮುನಿಯನ ತಾಂಡಾ ಅನ್ನದಾತರು ಇದ್ದರು.

ನಿರಂತರ ಮಳೆಯಿಂದ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, ಸಮರ್ಪಕವಾಗಿ ಗೊಬ್ಬರ ನೀಡಬೇಕು. ಮಳೆ ಚೆನ್ನಾಗಿ ಆಗುತ್ತಿರುವುದರಿಂದ ರೈತರಿಗೆ ಗೊಬ್ಬರ ಬೇಕು. ಸರ್ಕಾರ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡಬೇಕು. ಗೊಬ್ಬರ ಎಲ್ಲಿ ಖಾಲಿ ಆಗುತ್ತದೆ ಎಂಬ ಭಯದಿಂದ ಹತ್ತಾರು ರೈತರು ಟ್ರ್ಯಾಕ್ಟರ್ ಸಮೇತ ಬಂದು ಪಾಳೆ ನಿಂತಿದ್ದೇವೆ ಎಂದು ಚನ್ನಪಟ್ಟಣ ರೈತ ಕೃಷ್ಣಾ ವಡ್ಡರ ಹೇಳಿದರು.