ಹೊನ್ನಾಳಿ ತಾಲೂಕಿನಲ್ಲಿ ಭೂಮಿ ಹುಣ್ಣಿಮೆ ಆಚರಿಸಿದ ರೈತರು

| Published : Oct 18 2024, 12:00 AM IST

ಹೊನ್ನಾಳಿ ತಾಲೂಕಿನಲ್ಲಿ ಭೂಮಿ ಹುಣ್ಣಿಮೆ ಆಚರಿಸಿದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರೈತರು ತಮ್ಮ ಹೊಲ-ಗದ್ದೆ ಹಾಗೂ ತೋಟಗಳಲ್ಲಿ ಸೀಗೆಹುಣ್ಣಿಮೆ ಹಬ್ಬ ಅಂಗವಾಗಿ ಬೆಳೆಗಳಿಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

- ಕುಟುಂಬದೊಂದಿಗೆ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ತೆರಳಿ, ಭೂಮಿ-ಫಸಲಿಗೆ ವಿಶೇಷ ಪೂಜೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರೈತರು ತಮ್ಮ ಹೊಲ-ಗದ್ದೆ ಹಾಗೂ ತೋಟಗಳಲ್ಲಿ ಸೀಗೆಹುಣ್ಣಿಮೆ ಹಬ್ಬ ಅಂಗವಾಗಿ ಬೆಳೆಗಳಿಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ವಾರದಿಂದ ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪರಿಣಾಮ ಈ ಬಾರಿ ರೈತರು ಭೂಮಿಪೂಜೆಯನ್ನು ಆಚರಿಸಲು ಕೊಂಚ ಸಂಕಷ್ಟ ಎದುರಾಯಿತು. ಆದರೂ, ಹಬ್ಬ ಆಚರಣೆ ವಿಶೇಷ ಸಂಪ್ರದಾಯ ಆಗಿದ್ದರಿಂದ ಕುಟುಂಬ ಸಮೇತರಾಗಿ ಭೂಮಿಪೂಜೆ ನೆರವೇರಿಸಿ, ಭೂತಾಯಿಯನ್ನು ನಮಿಸಿದರು.

ಗುರುವಾರ ಬೆಳಗ್ಗೆಯಿಂದ ಮಳೆರಾಯ ಸೀಗೆಹುಣ್ಣಿಮೆ ಆಚರಣೆಗೆ ಎಂಬಂತೆ ತುಸು ಬಿಡುವು ಕೊಟ್ಟಿದ್ದ. ಇದರಿಂದ ರೈತರು ಮುಂಜಾನೆಯಿಂದಲೇ ಹಬ್ಬದ ತಯಾರಿ ಮಾಡಿಕೊಂಡು, ಕುಟುಂಬ ಸಮೇತರಾಗಿ ತಮ್ಮ ಹೊಲ-ಗದ್ದೆ, ತೋಟಗಳಿಗೆ ತೆರಳಿದರು. ಸಕಲ ಐಶ್ವರ್ಯವನ್ನು ಕರುಣಿಸುವ ಭೂಮಿ ತಾಯಿಗೆ ನಮಿಸಿದರು. ಭತ್ತ, ಮೆಕ್ಕೆಜೋಳ, ಅಡಕೆ ಮರ, ತೆಂಗು ಹೀಗೆ ವಿವಿಧ ಬೆಳೆಗಳಿಗೆ ಸೀರೆಯುಡಿಸಿ, ಸಿಂಗರಿಸಿ,ಪೂಜಿಸಿದರು. ಚರಗ (ಖಾದ್ಯ) ಚೆಲ್ಲುವ ಮೂಲಕ ಭೂಮಿ ತಾಯಿಯನ್ನು ಸಂತಷ್ಟಪಡಿಸುವ ಆಚರಣೆ ನಡೆಸಿದರು.

ಪ್ರತಿವರ್ಷ ಸೀಗೆ ಹುಣ್ಣಿಮೆ ದಿನ ರೈತರು ಗಾಡಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಸಿಂಗರಿಸಿಕೊಂಡು, ಕುಟುಂಬದವರ ಸಮೇತ ಜಮೀನಿಗೆ ಬಂದು ಫಸಲಿಗೆ ಪೂಜೆ ಮಾಡಿ, ಅನಂತರ ತಾಯಿಗೆ ಉಡಿ ತುಂಬಿ ಭೂಮಿ ತಾಯಿಯನ್ನು ಶ್ರದ್ಧೆಯಿಂದ ಪೂಜಿಸಿ, ಪ್ರಾರ್ಥಿಸುವ ವಿಶೇಷ ಆಚರಣೆ ಸೀಗೆಹುಣ್ಣಿಮೆ. ಪ್ರತಿವರ್ಷ ಉತ್ತಮ ಮಳೆ-ಬೆಳೆ ಕೊಟ್ಟು, ಸಕಲ ಜೀವರಾಶಿಗಳನ್ನು ಕಾಪಾಡು ತಾಯಿ ಎಂದು ರೈತರು ಬೇಡಿಕೊಳ್ಳುವ ಆಚರಣೆಯಾಗಿದೆ. ತಾಲೂಕಿನಲ್ಲಿ ಈ ಹಬ್ಬ ರೈತರು ಸಂತಸದಿಂದ ಆಚರಿಸಿದರು.

ಹೋಳಿಗೆ, ಕಡುಬು, ತರಾವರಿ ರೊಟ್ಟಿ, ಮೊಸರು ಬುತ್ತಿ, ಶೇಂಗಾ ಚಟ್ನಿ, ಇನ್ನಿತರೆ ಅನೇಕ ರುಚಿಕರ ಖಾದ್ಯಗಳನ್ನು ಭೂಮಿ ತಾಯಿಗೆ ನೈವೈದ್ಯ ಮಾಡಿ, ಚರಗ ಹಾಕಿದರು. ಅನಂತರ ಕುಟುಂಬದವರು ಸೇರಿ ಊಟ ಮಾಡಿದರು.

- - - -17ಎಚ್.ಎಲ್.ಐ2:

ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮದ ಪ್ರಗತಿಪರ ರೈತ ರಮೇಶ್‍ ಗೌಡ ಅವರು ಸೀಗೆ ಹುಣ್ಣಿಮೆ ಹಬ್ಬ ಅಂಗವಾಗಿ ಕುಟುಂಬದೊಂದಿಗೆ ಅಡಕೆ ಫಸಲಿಗೆ ಪೂಜೆ ಸಲ್ಲಿಸಿ, ವಿಶೇಷವಾಗಿ ಆಚರಿಸಿದರು.