ಸಾರಾಂಶ
ಈ ಇಬ್ಬರು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದಿದ್ದು, ಇವರ ಪಾಲಕರು ಕೃಷಿ ಮಾಡುತ್ತಿದ್ದಾರೆ
ಕೊಪ್ಪಳ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ 2 ಮತ್ತು 3ನೇ ಸ್ಥಾನ ಪಡೆದುಕೊಂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ತಮ್ಮ ಕಚೇರಿಯಲ್ಲಿ ಬುಧವಾರ ಸನ್ಮಾನಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕುಷ್ಟಗಿ ತಾಲೂಕಿನ ತಾವರಗೇರಾ ಡಿ. ದೇವರಾಜ ಅರಸು ಮೆಟ್ರಿಕ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ಮರಿದೇವಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗದಲ್ಲಿ 600ಕ್ಕೆ 577 (ಶೇ.96.17) ಅಂಕ ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ ಮತ್ತು ಕುಕನೂರಿನ ಡಿ. ದೇವರಾಜ ಅರಸು ಮೆಟ್ರಿಕ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ದೀಪಾ ಕಲಾ ವಿಭಾಗದಲ್ಲಿ 600ಕ್ಕೆ 576 (ಶೇ.96) ಅಂಕ ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಈ ಇಬ್ಬರು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದಿದ್ದು, ಇವರ ಪಾಲಕರು ಕೃಷಿ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರ ಮುಂದಿನ ಜೀವನ ಉಜ್ವಲವಾಗಲಿ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶುಭ ಹಾರೈಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ, ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಶಂಕರ ಕರಡಕಲ್, ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಬಸವರಾಜ ನೆಲಾಗಣಿ, ವಸತಿ ನಿಲಯ ಮೇಲ್ವಿಚಾರಕರು ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.