ನಾಳೆ ಮೈಸೂರಿನಲ್ಲಿ ರೈತ ಸಮಾವೇಶ: ಶಿವಪುರ ಮಹದೇವಪ್ಪ

| Published : Feb 12 2025, 12:31 AM IST

ನಾಳೆ ಮೈಸೂರಿನಲ್ಲಿ ರೈತ ಸಮಾವೇಶ: ಶಿವಪುರ ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಜಿಲ್ಲಾ ರೈತ ಸಮಾವೇಶದ ಬಿತ್ತಿಪತ್ರ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ೮೯ನೇ ನೆನಪು ಕಾರ್ಯಕ್ರಮದ ಅಂಗವಾಗಿ ಮೈಸೂರಲ್ಲಿ ಫೆ.೧೩ ರಂದು ನಡೆಯಲಿರುವ ಜಿಲ್ಲಾ ರೈತ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು ಒಂದೂವರೆ ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ೮೯ನೇ ನೆನಪು ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತಪರ ಯೋಜನೆ ರೂಪಿಸುವಂತೆ ಜಿಲ್ಲಾ ರೈತ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು. ಜಿಲ್ಲಾ ರೈತ ಸಮಾವೇಶದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ, ಹೊಸತನದೊಂದಿಗೆ ಹಳ್ಳಿ-ಹಳ್ಳಿಗೆ ರೈತಸಂಘ-ಕಿರು ಹೊತ್ತಿಗೆ ಬಿಡುಗಡೆ, ರೈತಪರ ಬಜೆಟ್‌ ಹಕ್ಕು ಮಂಡನೆ, ಸಂಘದ ಸಂವಿಧಾನ ಮುದ್ರಿತ ಪ್ರತಿ ಬಿಡುಗಡೆ ಹಾಗೂ ಸಂಘದ ಹೊಸ ಮಾದರಿ ನಾಮಫಲಕ ಅನಾವರಣ ಆಗಲಿದೆ ಎಂದರು.

ಜಿಲ್ಲೆಯ ರೈತರು, ರೈತ ಮಹಿಳೆಯರು, ರೈತ ಯುವಕರು, ಪ್ರಗತಿ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಹಂಗಳ ಮಾಧು,ವೀರನಪುರ ನಾಗರಾಜಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಣ್ಣ, ಯುವ ಘಟಕದ ಅಧ್ಯಕ್ಷ ಭರತ್‌, ಪ್ರಧಾನ ಕಾರ್ಯದರ್ಶಿ ರಘು, ಸಹ ಕಾರ್ಯದರ್ಶಿ ರೂಪೇಶ್‌, ಸಂಘಟನಾ ಕಾರ್ಯದರ್ಶಿ ಸೃಜನ್‌ಕುಮಾರ್‌, ಶಿವಕುಮಾರ್‌, ಮಂಜು ಇದ್ದರು.

ಮೈಕ್ರೋಫೈನಾನ್ಸ್‌ ವಿರುದ್ಧ ಸುಗ್ರೀವಾಜ್ಞೆ ರಾಜ್ಯಪಾಲರು ಮರು ಪರಿಶೀಲಿಸಿ:

ಮೈಕ್ರೋಫೈನಾನ್ಸ್‌ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದರೂ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್‌ ಕಳುಹಿಸಿದ್ದಾರೆ. ರಾಜ್ಯಪಾಲರ ನಿರ್ಧಾರದಿಂದ ಜನರಿಗೆ ತೊಂದರೆಯಾಗಲಿದೆ ಎಂದು ಜಿಲ್ಲಾ ರೈತಸಂಘ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿ, ರಾಜ್ಯಪಾಲರು ಸುಗ್ರೀವಾಜ್ಞೆ ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಮೆ ಕ್ಲೇಮು ೩ ದಿನದಲ್ಲಿ ಆಗದಿದ್ದರೆ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಬೀಗ:

ಬಂಡೀಪುರ ಅರಣ್ಯ ಇಲಾಖೆ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೂರು ದಿನಗಳೊಳಗೆ ಅಪಘಾತ ವಿಮೆ ಹಣ ಮೃತರ ಕುಟುಂಬಕ್ಕೆ ಕೊಡಿಸದಿದ್ದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಗೆ ಬೀಗ ಜಡಿಯಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದರು. ಎಚ್‌ಡಿಎಫ್‌ಸಿ ಹಾಗೂ ಎಸಿಎಫ್‌ ಅವರು ವಿಮೆ ಕ್ಲೇಮು ೧೫ ದಿನಗಳೊಳಗೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಭರವಸೆ ಈಡೇರದ ಕಾರಣ ಫೆ.೧೫ ರಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಮುಂದೆ ಪ್ರತಿಭಟನೆ ಅನಿವಾರ್ಯ ಎಂದರು.