ಕನ್ನಡಪ್ರಭ ವಾರ್ತೆ ಬೆಳಗಾವಿ ಹಿರೇಬಾಗೇವಾಡಿಯ ಬಳಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು) ನೂತನ ಕ್ಯಾಂಪಸ್‌ಗೆ ಸಂಬಂಧಿಸಿದ ರಸ್ತೆ ನಿರ್ಮಾಣ ಹಾಗೂ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೈತರೊಂದಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಇದೀಗ ತೀವ್ರ ಸ್ವರೂಪ ಪಡೆದಿದೆ.ಜ.19ರಂದು ಆರ್‌ಸಿಯು ಕರೆದಿರುವ ಸಭೆಯನ್ನು ಸಂಪೂರ್ಣ ಬಹಿಷ್ಕರಿಸುವ ತೀರ್ಮಾನವನ್ನು ಸ್ಥಳೀಯ ರೈತರು ಕೈಗೊಂಡಿದ್ದಾರೆ.

ಕನ್ನಡಪ್ರಭ ವರದಿ ಪರಿಣಾಮ

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿರೇಬಾಗೇವಾಡಿಯ ಬಳಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು) ನೂತನ ಕ್ಯಾಂಪಸ್‌ಗೆ ಸಂಬಂಧಿಸಿದ ರಸ್ತೆ ನಿರ್ಮಾಣ ಹಾಗೂ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೈತರೊಂದಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಇದೀಗ ತೀವ್ರ ಸ್ವರೂಪ ಪಡೆದಿದೆ.ಜ.19ರಂದು ಆರ್‌ಸಿಯು ಕರೆದಿರುವ ಸಭೆಯನ್ನು ಸಂಪೂರ್ಣ ಬಹಿಷ್ಕರಿಸುವ ತೀರ್ಮಾನವನ್ನು ಸ್ಥಳೀಯ ರೈತರು ಕೈಗೊಂಡಿದ್ದಾರೆ. ಸಮಸ್ಯೆ ಉದ್ಭವಿಸಿರುವ ತಮ್ಮ ಜಮೀನಿನಲ್ಲಿಯೇ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದರು. ಆರಂಭದಲ್ಲಿ ಇದಕ್ಕೆ ಸಮ್ಮತಿಸಿದ್ದ ವಿವಿ ಆಡಳಿತ, ನಂತರ ಬೇರೆಡೆ ಸಭೆ ಕರೆದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ರೈತರ ಪೂರ್ವಾನುಮತಿ ಪಡೆಯದೇ ಅವರ ಜಮೀನಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುರುತು ಹಾಕಿರುವುದು ಸೇರಿ ಹಲವು ಕಾಮಗಾರಿಗಳನ್ನು ವಿಶ್ವವಿದ್ಯಾಲಯ ಏಕಪಕ್ಷೀಯವಾಗಿ ಆರಂಭಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಭೂಮಿಯೇ ರೈತನ ಬದುಕು ಎಂಬ ಮೂಲಭೂತ ಸತ್ಯವನ್ನು ನಿರ್ಲಕ್ಷಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ರೈತರು ವಿಶ್ವವಿದ್ಯಾಲಯದ ವಾಹನಗಳನ್ನು ತಡೆದು, ಸಮಸ್ಯೆ ಇರುವ ಜಾಗದಲ್ಲಿಯೇ ಸಭೆ ನಡೆಸಿ ರೈತರ ಮಾತುಗಳನ್ನು ಖುದ್ದಾಗಿ ಆಲಿಸುವ ತನಕ ಕಾಮಗಾರಿ ನಡೆಯಬಾರದು ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ವಿಶ್ವವಿದ್ಯಾಲಯ ಆಡಳಿತ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲು ಒಪ್ಪಿತ್ತು. ಅದರಂತೆ, ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಕಾಮಗಾರಿ ಆರಂಭಿಸಬಾರದು ಎಂಬುದು ರೈತರು ಪಟ್ಟು ಹಿಡಿದಿದ್ದಾರೆ.

ಸಭೆಯ ಸ್ಥಳ ಮತ್ತು ಸ್ವರೂಪದ ಬದಲಿಸದ ವಿಶ್ವವಿದ್ಯಾಲಯ ನಿಲುವು ಖಂಡಿಸಿ ರೈತರು ಸಭೆಗೆ ಗೈರಾಗುವ ಮೂಲಕ ಬಹಿಷ್ಕರಿಸಿದ್ದಾರೆ. ಸಭೆ ಬಹಿಷ್ಕಾರದ ನಿರ್ಧಾರವನ್ನು ವಿಶ್ವವಿದ್ಯಾಲಯ ಆಡಳಿತಕ್ಕೂ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಗೂ ಅಧಿಕೃತವಾಗಿ ರೈತರು ತಿಳಿಸಿದ್ದಾರೆ.

ಬಾಕ್ಸ್

ರೈತರ ಆರೋಪಕ್ಕೆ ಆರ್‌ಸಿಯು ಸ್ಪಷ್ಟನೆ

ಈ ಮಧ್ಯೆ ರೈತ ವಿರೋಧಿ ನೀತಿಯ ಆರೋಪವನ್ನು ಆರ್‌ಸಿಯು ತಳ್ಳಿ ಹಾಕಿದೆ. ವಿಶ್ವವಿದ್ಯಾಲಯ ಆಡಳಿತದ ಪ್ರಕಾರ, ನೂತನ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮತ್ತು ಇತರ ಕಾಮಗಾರಿಗಳನ್ನು ಸರ್ಕಾರದ ಅನುಮತಿ ಹಾಗೂ ಕಾನೂನುಬದ್ಧ ಪ್ರಕ್ರಿಯೆಯಂತೆ ಕೈಗೊಳ್ಳಲಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ರೈತರ ಜಮೀನನ್ನು ಏಕಪಕ್ಷೀಯವಾಗಿ ವಶಪಡಿಸಿಕೊಂಡಿಲ್ಲ. ಅಗತ್ಯ ಭೂಮಿಯ ಅಳತೆಯನ್ನು ರೈತರ ಸಮ್ಮುಖದಲ್ಲಿಯೇ ನಡೆಸಿ, ಅವರ ಒಪ್ಪಿಗೆಯೊಂದಿಗೆ ಮುಂದಿನ ಹಂತದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆರ್‌ಸಿಯು ಕುಲಸಚಿವ ಸಂತೋಷ ಕಾಮಗೌಡ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆ ಮಾರ್ಗದ ಅಭಿವೃದ್ಧಿಗೆ ₹ 9 ಕೋಟಿ ಅನುದಾನವನ್ನು ಅನುಮೋದಿಸಲಾಗಿದೆ. ಸರ್ವೇ ಕಾರ್ಯ ನಡೆಯಬೇಕಿದ್ದು ಕಾಮಗಾರಿ ಆರಂಭಕ್ಕೂ ಮುನ್ನ ರೈತರ ಜೊತೆ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜ.19 ರಂದು ಬೆಳಗ್ಗೆ 10.30 ಗಂಟೆಗೆ ನೂತನ ಕ್ಯಾಂಪಸ್‌ನಲ್ಲಿ ರೈತರ ಜೊತೆಗೆ ಸಭೆ ಕರೆಯಲಾಗಿದೆ. ಆವರಣದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳ ಕುರಿತು ಕೆಲವು ತಪ್ಪು ಮಾಹಿತಿಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ರೈತರ ಜಮೀನನ್ನು ಏಕಪಕ್ಷೀಯವಾಗಿ ವಶಪಡಿಸಿಕೊಳ್ಳುವುದಿಲ್ಲ. ರೈತರ ಒಪ್ಪಿಗೆ ಪಡೆಯುವ ಮೂಲಕ ಮುಂದಿನ ಹಂತದ ಕಾರ್ಯಗಳು ಕೈಗೊಳ್ಳಲಾಗುತ್ತದೆ. ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.