ಪೆರಿಫೆರಲ್‌ ರಿಂಗ್‌ ರೋಡ್‌ ಯೋಜನೆಗೆ ವಶಪಡಿಸಿಕೊಳ್ಳಲಾದ ಭೂಮಿಗೆ 2013ರ ಭೂಸ್ವಾಧೀನ ಕಾಯ್ದೆಯನ್ವಯ ಸೂಕ್ತ ಪರಿಹಾರ ನೀಡುವ ಸಂಬಂಧ ರೈತರು, ಸಂತ್ರಸ್ತರು ಮಂಗಳವಾರ ಬಿಡಿಎ ಆವರಣದಲ್ಲಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೆರಿಫೆರಲ್‌ ರಿಂಗ್‌ ರೋಡ್‌ ಯೋಜನೆಗೆ ವಶಪಡಿಸಿಕೊಳ್ಳಲಾದ ಭೂಮಿಗೆ 2013ರ ಭೂಸ್ವಾಧೀನ ಕಾಯ್ದೆಯನ್ವಯ ಸೂಕ್ತ ಪರಿಹಾರ ನೀಡುವ ಸಂಬಂಧ ರೈತರು, ಸಂತ್ರಸ್ತರು ಮಂಗಳವಾರ ಬಿಡಿಎ ಆವರಣದಲ್ಲಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ರೈತರು, ನಾವು ಪ್ರತಿಭಟನೆಗೆ ಬಂದಿರಲಿಲ್ಲ. ಕೇವಲ ಅಧಿಕಾರಿಗಳ ಜತೆಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲು ಆಗಮಿಸಿದ್ದೆವು. ಆದರೂ ಬಿಡಿಎ ಅಧಿಕಾರಿಗಳು ಸ್ಪಂದಿಸದೆ ಪೊಲೀಸರ ಮೂಲಕ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿಗಾಗಿ ಪುನಃ ಬಿಡಿಎ ಕಚೇರಿಗೆ ಬರಲಿದ್ದೇವೆ. ಸಭೆಯನ್ನು ಆಯೋಜಿಸಿ ಸಂಸ್ಥೆಯು ಸರ್ಕಾರಕ್ಕೆ ಏನು ಮಾಹಿತಿಯನ್ನು ನೀಡಿದೆಯೋ ಅದನ್ನು ಪಾರದರ್ಶಕವಾಗಿ ಜಮೀನು ಮಾಲೀಕರಾದ ರೈತರೊಡನೆ ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ನ್ಯಾಯಯುತ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಭರವಸೆಯಿಟ್ಟು ನಾವು ಕಾಯುತ್ತಿದ್ದೆವು 2013ರ ಭೂಸ್ವಾಧೀನ ಹಾಗೂ ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಅದನ್ನು ಕಡೆಗಣಿಸಿ ಸರ್ಕಾರವು ವಾಮ ಮಾರ್ಗದಲ್ಲಿ ಯೋಜನೆ ಪ್ರಾರಂಭಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಇದು ರೈತರಿಗೆ ಭಾರಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.