ನರಗುಂದ: ಮಲಪ್ರಭಾ ಬಲದಂಡೆ ಮತ್ತು ಕೊಳಚೆ ಕಾಲುವೆಗಳಲ್ಲಿ ಹೂಳು ತೆಗೆಸದೇ ಇರುವುದರಿಂದ ಕೆಳಭಾಗದ ಜಮೀನುಗಳಿಗೆ ನೀರು ಮುಟ್ಟುತ್ತಿಲ್ಲ. ಆದ್ದರಿಂದ ನೀರಾವರಿ ಅಧಿಕಾರಿಗಳು ಕಾಲುವೆ ಹೂಳು ತೆಗೆಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.
ಸೋಮವಾರ ಪಟ್ಟಣದ ನೀರಾವರಿ ನಿಗಮದ ಕಚೇರಿಯಲ್ಲಿ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ಮಲಪ್ರಭಾ ಬಲದಂಡೆ ಕಾಲುವೆ ಮತ್ತು ಕೊಣ್ಣೂರು ಗ್ರಾಮದಲ್ಲಿರುವ ಕೊಳಚೆ ಕಾಲುವೆಗಳಲ್ಲಿ ಜಾಲಿ ಕಂಟಿ ಬೆಳೆದು ಹೂಳು ತುಂಬಿದೆ. ಇದರಿಂದ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆ ಮಾಡಿದರೂ ಸರಿಯಾಗಿ ರೈತರ ಜಮೀನುಗಳಿಗೆ ತಲುಪುತ್ತಿಲ್ಲ. ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ಕಾಲುವೆ ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೂಳು ತೆಗೆಸಿ ಕೆಳಭಾಗದ ಜಮೀನುಗಳಿಗೆ ನೀರು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದರು.ಸರ್ಕಾರದಿಂದ ಪ್ರತಿವರ್ಷ ಲಕ್ಷಾಂತರ ರುಪಾಯಿ ಹಣವನ್ನು ಕಾಲುವೆಗಳಲ್ಲಿರುವ ಹೂಳು ತೆಗೆಸಲು ನೀಡುತ್ತದೆ. ಆದರೆ ನೀರಾವರಿ ಅಧಿಕಾರಿಗಳು ಬೇಸಿಗೆ ಸಮಯದಲ್ಲಿ ಕಾಲುವೆ ಸ್ವಚ್ಛ ಮಾಡದೇ ಕಾಲುವೆಗಳಿಗೆ ನೀರು ಪೂರೈಕೆಯಾದ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಮೂಲಕ ಅಲ್ಪಸ್ವಲ್ಪ ಹೂಳು ತೆಗೆಸಿ ಹಣ ಲೂಟಿ ಮಾಡುತ್ತಿದ್ದಾರೆ. ಈ ಹಿಂದೆ ಕಾಲುವೆ ಸ್ವಚ್ಛ ಮಾಡಿದ್ದೇವೆಂದು ಖಾಸಗಿ ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಹೊಂದಾಣಿಕಯಾಗಿ ಲಕ್ಷಾಂತರ ರು. ಹಣ ನುಂಗಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ಕಾಲುವೆ ಹೂಳು ತೆಗೆಸದೇ ಹಣ ನುಂಗಿದ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಣ ಲೂಟಿ ಮಾಡುವುದರಲ್ಲಿ ಕೈಜೋಡಿಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಕುರಿಯವರ ಮನವಿ ಸ್ವೀಕರಿಸಿದರು.ಈ ವೇಳೆ ಶೇಖರಗೌಡ ಹಳೇಪೊಲೀಸಪಾಟೀಲ, ಶಿವಾನಂದ ಬ್ಯಾಳಿ, ಗುರಶಾಂತ ನರಸಾಪೂರ, ಸುರೇಶ ಐನಾಪೂರ, ಮುತ್ತಣ್ಣ ಬದಾಮಿ ಸೇರಿದಂತೆ ಮುಂತಾದವರು ಇದ್ದರು.