ಸಾರಾಂಶ
ತುರುವೇಕೆರೆ: ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಹಾಗೂ ಬೆಸ್ಕಾಂ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ರೈತಾಪಿಗಳು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗದಲ್ಲಿ ತಾಲೂಕು ರಾಜ್ಯ ರೈತ ಸಂಘ ಹಾಗೂ ಮಾಯಸಂದ್ರ ಹೋಬಳಿಯ ಅಜ್ಜನಹಳ್ಳಿ ಬ್ಯಾಲ ಗ್ರಾಮದ ರೈತರು ಸರ್ಮಪಕ ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀನಿವಾಸ್ ಗೌಡ, ಬೇಸಿಗೆ ಪ್ರಾರಂಭದಲ್ಲಿಯೇ ಸರ್ಕಾರ ರೈತರಿಗೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಮುಂದಾಗಿದೆ. ದಿನದಲ್ಲಿ ಸುಮಾರು 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು. ಆದರೆ ಕೇವಲ ಮೂರ್ನಾಲ್ಕು ಗಂಟೆ ವಿದ್ಯುತ್ ನೀಡುತ್ತಿದ್ದು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.ತಾಲೂಕಿನ ಗಡಿ ಭಾಗವಾದ ಅಜ್ಜನಹಳ್ಳಿ ಗ್ರಾಮಗಳ ರೈತರಿಗೆ ಸಮರ್ಪಕವಾದ ವಿದ್ಯುತ್ ನೀಡುತಿಲ್ಲ. ಪ್ರತಿ ದಿನ ರೈತರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ರೈತರು ತೋಟಗಳು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಅದಲ್ಲದೇ ತೋಟದಲ್ಲಿ ವಾಸ ಮಾಡುವ ರೈತರಿಗೆ ವಿದ್ಯುತ್ ಕಡಿತಗೊಳಿಸಲಾಗಿದೆ. ಸಿಂಗಲ್ ಫೇಸ್ ವಿದ್ಯುತ್ ನಿಲ್ಲಿಸಲಾಗಿದೆ. ತೋಟಗಳಲ್ಲಿ ಚಿರತೆ ಕಾಟಗಳು ಹೆಚ್ಚಾಗಿದೆ.
ತೋಟದ ಮನೆಯಲ್ಲಿನ ರೈತರು ಜೀವ ಭಯದಿಂದ ವಾಸ ಮಾಡುವಂತಾಗಿದೆ. ಆದ್ದರಿಂದ ಬೆಸ್ಕಾಂ ಇಲಾಖೆ ಕೂಡಲೇ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದರೆ ಮಾರ್ಚ್ 3 ರಂದು ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗ ಚಳುವಳಿ ನಡೆಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂ ಪಾಷ ರೈತ ಮುಖಂಡರಾದ ಪುರುಷೋತ್ತಮ್, ಸೋಮಶೇಖರ್, ನಾಗರಾಜು ರೈತರಾದ ಲಕ್ಷ್ಮಣಯ್ಯ, ಕುಮಾರ್, ಕೃಷ್ಣಪ್ಪ, ಭದ್ರೇಗೌಡ, ನಟರಾಜು, ವರದೇಗೌಡ, ಶಶಿಕುಮಾರ್, ಗೋವಿಂದರಾಜು ಆಶ್ವತ್ ನಾರಾಯಣ್, ಚಿಕ್ಕೇಗೌಡ ಸೇರಿದಂತೆ ಹಲವು ರೈತರು ಇದ್ದರು.೨೦ ಟಿವಿಕೆ ೩ - ತುರುವೇಕೆರೆ ಪಟ್ಟಣದ ಬೆಸ್ಕಾಂ ಇಲಾಖೆ ಮುಂಭಾಗ ತಾಲೂಕು ರಾಜ್ಯ ರೈತ ಸಂಘ ಹಾಗೂ ಮಾಯಸಂದ್ರ ಹೋಬಳಿ ಅಜ್ಜನಹಳ್ಳಿ ಬ್ಯಾಲ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.