ಸಾರಾಂಶ
ಚಾಮರಾಜನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರನ್ನು ರೈತ ಸಂಘದ ಕಾರ್ಯಕರ್ತರು ತಡೆದು ಮನವಿ ಪತ್ರಗಳನ್ನು ಕಾರ್ಯಕ್ರಮದ ಸ್ಥಳದಲ್ಲೇ ಬೀಸಾಡಿ ಹೋಗಿರುವುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತರು, ಸಾರ್ವಜನಿಕರು ತಮ್ಮ ಮನವಿ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿ ಪತ್ರಗಳನ್ನು ಕಾರ್ಯಕ್ರಮದ ಸ್ಥಳದಲ್ಲೇ ಬೀಸಾಡಿ ಹೋಗಿರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸ್ಟಷ್ಟೀಕರಣ ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಉಸ್ತುವಾರಿ ಸಚಿವರಿರಾಗಿ ಕಾಯ್ದು ಕುಳಿತರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಯಿತು. ಸ್ಥಳಾಕ್ಕಾಗಮಿಸಿದ ಎಸ್ಪಿ ಕವಿತಾ, ಅಡಿಷನಲ್ ಎಸ್ಪಿ ಉದೇಶ್ ಕಾರ್ಯಕರ್ತರ ಮನವಿಯನ್ನು ಆಲಿಸಿ, ಪ್ರತಿಭಟನೆ ಮಾಡಬೇಡಿ. ಉಸ್ತುವಾರಿ ಸಚಿವರನ್ನು ಭೇಟಿ ಮಾಡಿಸುತ್ತೇವೆ ಎಂದು ಹೇಳಿ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಒಳಗೆ ಕರೆದುಕೊಂಡು ಹೋದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ರೈತರ ಸಂಘದ ಕಾರ್ಯಕರ್ತರನ್ನು ಭೇಟಿ ಮಾಡಿ ಮನವಿಯನ್ನು ಆಲಿಸಿದರು. ರೈತ ಮುಖಂಡ ಗುರುಪ್ರಸಾದ್ ಮಾತನಾಡಿ, ನಾಡಿನ ಮುಖ್ಯಮಂತ್ರಿಗಳಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ರೈತರು ಮತ್ತು ಸಾರ್ವಜನಿಕರು ನೀಡಿದ ಮನವಿಗಳನ್ನು ಈ ರೀತಿ ಬೀಸಾಡಿ ಹೋಗಿರುವುದು ಎಷ್ಟು ಸರಿ. ಒಂದು ಕಾರ್ಯಕ್ರಮದಲ್ಲಿ ಈ ರೀತಿ ಮನವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಇನ್ನು ಜನಸ್ಪಂದನಾ ಕಾರ್ಯಕ್ರಮದ ಮನವಿಗಳನ್ನು ಯಾವ ರೀತಿ ಪರಿಶೀಲಿಸುತ್ತೀರಿ. ಈ ಬಗ್ಗೆ ನೀವು ಸ್ಪಷ್ಟೀಕರಣ ನೀಡಬೇಕು. ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ಮನವಿ ಪತ್ರಗಳನ್ನು ನೀಡಿದರೆ ಅದನ್ನು ಅಲ್ಲಿಯೇ ಎಸೆದು ಹೋದರೆ ಹೇಗೆ ಇವರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ ಎಂದರು.ಸಚಿವ ಕೆ.ವೆಂಕಟೇಶ್ ಮಾತನಾಡಿ, ಯಾರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ, ನಮ್ಮ ಸರ್ಕಾರ ಜನಪರವಾದ ಸರ್ಕಾರ, ಈ ಬಗ್ಗೆ ವಿಡಿಯೋ ತುಣುಕಗಳನ್ನು ನೋಡಿ, ಮುಖ್ಯಮಂತ್ರಿಯವರೊಡನೆ ಮಾತನಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿ ಕಾರ್ಯಕ್ರಮಕ್ಕೆ ತೆರಳಿದರು. ರೈತ ಸಂಘದ ಮಾಡ್ರಹಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು ಇತರರು ಭಾಗವಹಿಸಿದ್ದರು.ಕನ್ನಡಪರ ಕಾರ್ಯಕರ್ತರ ಪ್ರತಿಭಟನೆ:
ಕನ್ನಡಪರ ಹೋರಾಟಗಾರರಾದ ಶಾ.ಮುರುಳಿ, ಚಾ.ವೆಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಕುಮಾರ್ ಇತರರು ರೈತ ಸಂಘದ ಕೆಲ ಕಾರ್ಯಕರ್ತರು ಕನ್ನಡ ವಿರೋಧಿಗಳು ನಮ್ಮ ಕಾರ್ಯಕ್ರಮಕ್ಕೆ ಬರುತ್ತಿರುವ ಸಚಿವರನ್ನು ಬೇಕಂತಲೇ ತಡೆ ಒಡ್ಡುತ್ತಿದ್ದಾರೆ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆಗೆ ಮುಂದಾದರು. ತಕ್ಷಣ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು ತಡೆದು ಮನವೊಲಿಸಿ ಕರೆದೊಯ್ದರು.