ಬೆಳೆಗೆ ಪರಿಹಾರ, ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

| Published : Aug 15 2024, 01:47 AM IST

ಬೆಳೆಗೆ ಪರಿಹಾರ, ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಘಟಪ್ರಭಾ ಪ್ರವಾಹದ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಾನು ಕೂಡಾ ನಿಮ್ಮಹಾಗೆ ರೈತನಿದ್ದು ನನ್ನ ಹೊಲವು ಸಹಿತ ಪ್ರವಾಹಕ್ಕೆ ಮುಳುಗಿದೆ. ಹೀಗಾಗಿ ರೈತರ ಸಮಸ್ಯೆಗಳು ಏನು ಎಂಬುವುದು ನನಗೆ ಅರಿವು ಇದೆ. ನಾನು ಯಾವತ್ತೂ ರೈತಪರ ಇದ್ದೇನೆ. ರೈತರ ಹಿತವೇ ನನಗೆ ಮುಖ್ಯ.ತಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಾನು ಅವಕಾಶ ಮಾಡಿಕೊಡುತ್ತೇನೆ. ತಾವು ದಿನಾಂಕ ನಿಗದಿಪಡಿಸಿ ಎಂದು ಸಚಿವ ಆರ್.ಬಿ.ತಿಮ್ಮಾಪುರ ರೈತರಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಘಟಪ್ರಭಾ ಪ್ರವಾಹದ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ನಾನು ಕೂಡಾ ನಿಮ್ಮಹಾಗೆ ರೈತನಿದ್ದು ನನ್ನ ಹೊಲವು ಸಹಿತ ಪ್ರವಾಹಕ್ಕೆ ಮುಳುಗಿದೆ. ಹೀಗಾಗಿ ರೈತರ ಸಮಸ್ಯೆಗಳು ಏನು ಎಂಬುವುದು ನನಗೆ ಅರಿವು ಇದೆ. ನಾನು ಯಾವತ್ತೂ ರೈತಪರ ಇದ್ದೇನೆ. ರೈತರ ಹಿತವೇ ನನಗೆ ಮುಖ್ಯ.ತಾವು ಮುಖ್ಯಮಂತ್ರಿಗಳನ್ನು ಭೇಟಿಯಾಗಲು ನಾನು ಅವಕಾಶ ಮಾಡಿಕೊಡುತ್ತೇನೆ. ತಾವು ದಿನಾಂಕ ನಿಗದಿಪಡಿಸಿ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ರೈತರಿಗೆ ತಿಳಿಸಿದರು.

ಬುಧವಾರ ಸ್ಥಳೀಯ ಪಿಡಬ್ಲ್ಯುಡಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆಯಲ್ಲಿ ರೈತ ಮುಖಂಡರು ಪ್ರವಾಹಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಶಾಶ್ವತ ಪರಿಹಾರ ಒದಗಿಸಬೇಕು ಎಂದಾಗ ಸಚಿವರು ರೈತ ಮುಖಂಡರನ್ನು ಸಿಎಂ ಅವರನ್ನ ಭೇಟಿ ಮಾಡಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವೆ ಎಂದು ತಿಳಿಸಿದರು.

ಈ ವೇಳೆ ರೈತ ಮುಖಂಡರು, ಮುಧೋಳ ತಾಲೂಕಿನ ಘಟಪ್ರಭಾ ನದಿಗೆ 2019 ರಿಂದ 2024ರವರೆಗೆ ಪ್ರತಿವರ್ಷ ಪ್ರವಾಹದಿಂದಾಗಿ ನದಿಪಾತ್ರದ ಗ್ರಾಮಗಳ ಮುಳಗಡೆಯಾಗುತ್ತಲಿವೆ. ಅಲ್ಲದೇ ನದಿ ದಂಡೆಯ ಸಹಸ್ರಾರು ಸಂಖ್ಯೆಯ ಹೊಲಗದ್ದೆಗಳು ಜಲಾವೃತಗೊಂಡು ರೈತರು ಬೆಳೆದ ಬೆಳೆಯು ನೀರಲ್ಲಿ ಮುಳಗಿ ಕೊಳೆತು ಹೊಗುತ್ತಿವೆ ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಾರಣ ನೆರೆ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಮುಳಗಡೆಯಾಗುವ ಮನೆಗಳಿಗೆ ಶಾಶ್ವತ ಸೂರು ಒದಗಿಸಬೇಕು. ಅಷ್ಟೇ ಅಲ್ಲ ಮುಳಗಡೆಯಾದ ಪ್ರತಿ ಎಕರೆ ಕಬ್ಬಿಗೆ ₹1 ಲಕ್ಷ, ಪ್ರತಿ ಎಕರೆ ಇತರೆ ಬೆಳೆಗಳಿಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಮಖಂಡಿ ಉಪ-ವಿಭಾಗಾಧಿಕಾರಿಗಳು, ತಹಸೀಲ್ದಾರರು, ಹೆಸ್ಕಾಂ, ಲೋಕೋಪಯೋಗಿ, ನೀರಾವರಿ ಇಲಾಖೆ ಸೇರಿದಂತೆ ತಾಲೂಕಿನ ಪ್ರಮುಖ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ರೈತಮುಖಂಡರಾದ ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ದುಂಡಪ್ಪ ಯರಗಟ್ಟಿ, ನಾಗೇಶ ಗೋಲಶೆಟ್ಟಿ, ಎ.ಜಿ.ಪಾಟೀಲ, ವೆಂಕಣ್ಣ ಗಿಡಪ್ಪನವರ, ಉದಯಕುಮಾರ ಸಾರವಾಡ, ಸುರೇಶ ರಾಮತೀರ್ಥ, ಎಸ್.ಎಸ್. ಅಕ್ಕಿಮರಡಿ, ನಾರಾಯಣ ಹವಾಲ್ದಾರ, ಮಹೇಶ ಪಾಟೀಲ, ನಾಗೇಶ ಸೋರಗಾವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದರು.