ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ಮತ್ತಿತರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರತ್ನ ಭಾರತ ರೈತ ಸಮಾಜದ ನೇತೃತ್ವದಲ್ಲಿ ರೈತರು ಗುರುವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ಮಾಡಿದರು.ಕಳೆದ ನಾಲೈದು ವರ್ಷಗಳಿಂದ ರಾಜ್ಯಾದ್ಯಂತ ರೈತರು ಅತಿವೃಷ್ಟಿ ಅನಾವೃಷ್ಟಿ ಹಾಗೂ ಭೀಕರ ಬರಗಾಲಕ್ಕೆ ತುತ್ತಾಗಿ, ರೈತರು ಮರಣ ಹೊಂದಿದ್ದಾರೆ .ಇನ್ನೂ ಸಾಯುವ ಸ್ಥಿತಿಯಲ್ಲಿದ್ದಾರೆ. ಹೋದ ವರ್ಷ ಭೀಕರ ಬರಗಾಲ ಈ ವರ್ಷ ಮಳೆಯಿಂದ ಅತಿವೃಷ್ಟಿಗೆ ತುತ್ತಾಗಿ ರೈತನು ಮಾಡಿದ ಬೆಳೆ ಸಾಲ ತುಂಬಲಾರದ ಹಾಗೂ ಮನೆತನದಲ್ಲಿ ಕುಟುಂಬವನ್ನು ನಡೆಸಲಾಗದ ಪರಿಸ್ಥಿತಿಯಲ್ಲಿ ರಾಜ್ಯದ ರೈತರ ಜೀವನ ಇರುತ್ತದೆ ಎಂದು ಪ್ರತಿಭಟನಾನಿರತ ರೈತರು ಹೇಳಿದರು.
ಸಂಕಷ್ಟದಲ್ಲಿರುವ ಧಾರವಾಡ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕನಿಷ್ಠ ಪ್ರತಿ ರೈತರಿಗೆ ₹ 25000ರಿಂದ ಗರಿಷ್ಠ ₹50000 ಬೆಳೆಹಾನಿ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು. ರಾಜ್ಯದ ಸಮಸ್ತ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಹಾಗೂ ಅತಿಯಾದ ಮಳೆಯಿಂದ ರೈತರು ಹಾಗೂ ಸಾರ್ವಜನಿಕರ ಮನೆಗಳು ಸಂಪೂರ್ಣ ಬಿದ್ದಿದ್ದು, ಕೂಡಲೇ ಹೊಸದಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.ಮಹದಾಯಿ ಕಳಸಾ-ಬಂಡೂರಿಯ ನಿರಂತರ ಹೋರಾಟ ನಡೆಯುತ್ತಿದ್ದು, ಈ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ರೈತರ ಪಹಣಿಯ ಕಾಲಂ ನಂಬರ್ 11 ರಲ್ಲಿ ವಕ್ಫ್ ಬೋರ್ಡ್ ಎಂದು ನಮೂದಿಸಿದ್ದು, ಕೂಡಲೇ ಇದನ್ನು ತೆಗೆದುಹಾಕಬೇಕು. ವಕ್ಸ್ ಬೋರ್ಡ್ ಕಾನೂನು ಬಾಹಿರವಾಗಿದ್ದು, ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಸರ್ಕಾರದ ನಿಯಮದಂತೆ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಹಗಲು 3 ಫೇಸ್ ವಿದ್ಯುತ್ ನೀಡಬೇಕು. ಬ್ಯಾಂಕ್ ನವರು ಬೆಳೆಸಾಲ ಪಡೆದ ರೈತರಿಗೆ ವಕೀಲರಿಂದ ನೋಟಿಸ್ ಕೊಟ್ಟಿದ್ದು, ಕೂಡಲೇ ನೋಟಿಸ್ ಹಿಂದಕ್ಕೆ ತೆಗೆದುಕೊಳ್ಳಲು ಆದೇಶ ನೀಡಬೇಕು ಎಂದು ಆಗ್ರಹಿಸಿದರು.ರತ್ನ ಭಾರ ರೈತ ಸಮಾಜದ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ , ಬಸವರಾಜ ಅಣ್ಣಿಗೇರಿ, ಹನುಮಂತಗೌಡ ಗಡದರ, ಪ್ರಕಾಶ ಕಿತ್ತೂರ, ಶಾಂತಗೌಡ ಪಾಟೀಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.