ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರೈತರ ಸಮಸ್ಯೆ ದ್ವಿಗುಣಗೊಳ್ಳುತ್ತಲೇ ಇದೆ. ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಿಲ್ಲ. ಸರ್ಕಾರ ಜಾರಿಗೊಳಿಸುವ ಬೆಂಬಲ ಬೆಲೆಗೆ ಯಾವುದೇ ಮಾನದಂಡ ಇಲ್ಲ. ಬಿಜೆಪಿ 10 ವರ್ಷಗಳ ಹಿಂದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಮತ್ತು ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ಹೇಳಿತ್ತು. ಆದರೆ, ಕೊಟ್ಟ ಮಾತು ಮರೆತಿದೆ ಎಂದು ಪ್ರತಿಪ್ರಭಟನಾಕಾರರು ಆಗ್ರಹಿಸಿದರು.
ಕೃಷಿ ಉತ್ಪಾದನಾ ವೆಚ್ಚ 3 ಪಟ್ಟು ಹೆಚ್ಚಳವಾಗಿದೆ. ರೈತರು ಸಾಲಗಾರರು ಆಗುತ್ತಿದ್ದಾರೆ. ಖಾಸಗೀಕರಣದ ಭಾಗವಾಗಿ ಐಪಿ ಸೆಟ್‍ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುತ್ತಿರುವುದು, ಸ್ವಯಂ ಆರ್ಥಿಕ ಯೋಜನೆ ಜಾರಿಮಾಡಿರುವುದು ರೈತರನ್ನು ಕೃಷಿಯಿಂದ ಹೊರ ಹಾಕುವ ಪ್ರಯತ್ನವಾಗಿದೆ ಎಂದು ದೂರಿದರು.ಜಿಂದಾಲ್ ಕಂಪನಿಗೆ ಹಗ್ಗದ ಭೂಮಿ ಕೊಡಬಾರದು. ಅತಿವೃಷ್ಠಿಯಿಂದಾದ ಜನ, ಜಾನುವಾರು, ಮಳೆ, ಬೆಳೆ, ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು. ಐಪಿ ಸೆಟ್‍ಗೆ ಆಧಾರ್ ನಂಬರ್ ಜೋಡಣೆ ಮಾಡಬಾರದು. ಸ್ವಯಂ ಆರ್ಥಿಕ ಯೋಜನೆ ಕೈಬಿಟ್ಟು ಹಿಂದಿನಂತೆ ಅಕ್ರಮ - ಸಕ್ರಮ ಯೋಜನೆ ಮುಂದುವರೆಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಬೇಕು. ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು. ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ತಕ್ಷಣವೇ ಸಾಗುವಳಿ ಹಕ್ಕುಪತ್ರ ನೀಡಬೇಕು. ಬ್ಯಾಂಕ್‍ಗಳು ಬಲವಂತದ ಸಾಲ ವಸೂಲಿ ನಿಲ್ಲಿಸಬೇಕು. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕೆ.ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಹನುಮಂತಪ್ಪ, ಜಿ.ಎನ್.ಪಂಚಾಕ್ಷರಿ, ಜ್ಞಾನೇಶ್, ಸಿ.ಚಂದ್ರಪ್ಪ, ಕಸಟ್ಟಿ ರುದ್ರೇಶ್, ಇ.ಬಿ.ಜಗದೀಶ್ ಮತ್ತಿತರರು ಇದ್ದರು.