ಕನ್ನಡಪ್ರಭ ವಾರ್ತೆ ಕೋಲಾರ

ಮಾವು ಬೆಲೆ ನಿಗದಿ ಪಡಿಸುವಂತೆ ಶ್ರೀನಿವಾಸಪುರ ಶ್ರೀ ಭೈರವೇಶ್ವರ ಮಾವು ಬೆಳೆಗಾರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಿ. ಸೀತಾರಾಮರೆಡ್ಡಿ ಮಾತನಾಡಿ, ಶ್ರೀನಿವಾಸಪುರ ಕ್ಷೇತ್ರ ಸೇರಿ ಕೋಲಾರ ಜಿಲ್ಲೆಯು ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಮಾವಿನ ಬೆಳೆ ಬೆಳೆಯುತ್ತಿದ್ದು, ಬೆಳೆದಂತಹ ಮಾವಿನಕಾಯಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

ಒಂದು ಟನ್ ಮಾವಿನಕಾಯಿ ಬೆಳೆಯಲು ೮ ರಿಂದ ೧೦ ಸಾವಿರ ರು. ಖರ್ಚು ಬರುತ್ತದೆ. ಆದರೆ ಪ್ರಸ್ತುತ ಒಂದು ಟನ್‌ಗೆ ನಾಲ್ಕುರಿಂದ ಐದು ಸಾವಿರ ರು. ಕಾರ್ಖಾನೆಗಳು ನಿಗದಿ ಮಾಡಿದ್ದಾರೆ, ಮಾವಿನಕಾಯಿ ಕೊಯ್ದು ಮಾರಲು ನಾಲ್ಕರಿಂದ ಐದು ಸಾವಿರ ರು. ಖರ್ಚು ಬರುತ್ತದೆ, ಎಷ್ಟೋ ಜನ ರೈತರು ತೋಟಗಳಲ್ಲಿ ಮಾವಿನ ಕಾಯಿಗಳನ್ನು ಕೀಳದೇ ಬಿಟ್ಟಿದ್ದಾರೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಒಂದು ಟನ್ ಮಾವಿನ ಕಾಯಿಗೆ ಕನಿಷ್ಠ ೧೦ ಸಾವಿರ ರು. ನಿಗದಿ ಮಾಡಲು ಸರ್ಕಾರಕ್ಕೆ ಮನವಿ ಮಾಡಬೇಕು, ಹಿಂದಿನ ವರ್ಷ ಈ ರೀತಿ ಸಮಸ್ಯೆಯಾದಾಗ ಪಿಡಿಪಿಎಸ್ ಯೋಜನೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಅದೇ ರೀತಿ ಈ ವರ್ಷವೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.


ಸಂಘದ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ, ಖಜಾಂಚಿ ಎಂ. ಬೈರೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಹೆಚ್. ಸಂಪತ್ ಕುಮಾರ್, ಪ್ರಸನ್ನ ಕುಮಾರ್, ವಿ. ಚೌಡರೆಡ್ಡಿ, ಜಯರಾಮರೆಡ್ಡಿ, ದೊಡ್ಡನಂಜಪ್ಪ, ಕೆ.ಟಿ. ಜಯಣ್ಣ ಇದ್ದರು.