ಹಗಲಿಗೆ ಬಿಳಿ ಮೂತಿ ಮಂಗಗಳ ಕಾಟ ಜೋರಾಗಿದೆ. ಇನ್ನೂ ಬೆಳೆಯದ ಎಳೆ ಅಡಕೆಗಳನ್ನೇ ತಿಂದುಹಾಕುತ್ತಿವೆ. ವಿಶೇಷವಾಗಿ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿ, ಜಾನ್ಮನೆ ಹಾಗೂ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ.
ಶಿರಸಿ: ತಾಲೂಕಿನ ಸಂಪಕಂಡ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು. ರೈತರು ಬೆಳೆ ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಶಾಶ್ವತ ಪರಿಹಾರ, ಮಾರ್ಗೋಪಾಯಗಳನ್ನು ಸೂಚಿಸುವಂತೆ ಆಗ್ರಹಿಸಿ ಈ ಭಾಗದ ರೈತರು ಜಾನ್ಮನೆ ವಲಯಾರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.ಅಡಕೆ ತೋಟಕ್ಕೆ ಕಾಡು ಪ್ರದೇಶದಿಂದ ಆಗಮಿಸುವ ಹಂದಿಗಳ ಉಪಟಳ ಜಾಸ್ತಿಯಾಗಿದೆ. ರೈತರು ರಾತ್ರಿ ಇಡೀ ನಿದ್ದೆಗೆಟ್ಟು ಹಂದಿಗಳನ್ನು ಕಾಯುವ ಸ್ಥಿತಿ ಬಂದೊದಗಿದೆ.ಇನ್ನು ಹಗಲಿಗೆ ಬಿಳಿ ಮೂತಿ ಮಂಗಗಳ ಕಾಟ ಜೋರಾಗಿದೆ. ಇನ್ನೂ ಬೆಳೆಯದ ಎಳೆ ಅಡಕೆಗಳನ್ನೇ ತಿಂದುಹಾಕುತ್ತಿವೆ. ವಿಶೇಷವಾಗಿ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿ, ಜಾನ್ಮನೆ ಹಾಗೂ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ಮಂಗಗಳು ಅಡಕೆ ಗಿಡಗಳನ್ನೇ ಮುರಿದು ತಿನ್ನುತ್ತಿವೆ. ಇನ್ನೊಂದೆಡೆ ಕೆಂಚಳಿಲು ತೆಂಗಿನ ಎಳೆ ಮಿಳ್ಳೆ ತಿನ್ನುತ್ತಿರುವುದರಿಂದ ನಮಗೆ ಯಾವ ಬೆಳೆಯೂ ಕೈಗೆ ಸಿಗದಂತಾಗಿ ಸಮಸ್ಯೆ ಎದುರಿಸಬೇಕಾಗಿದೆ.ಇತ್ತೀಚಿನ ದಿನಗಳಲ್ಲಿ ನವಿಲುಗಳೂ ಅಡಕೆ ತೋಟಕ್ಕೆ ಆಗಮಿಸಿ ಸಣ್ಣ ಗಿಡಗಳ ಗರಿ ಕತ್ತರಿಸುತ್ತಿವೆ ಎಂದು ಅಳಲು ತೋಡಿಕೊಂಡರು.
ಕಾಡುಪ್ರಾಣಿಗಳು ರೈತರ ಹೊಲ, ತೋಟಗಳಿಗೆ ಬರದಂತೆ ಯಾವ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಕೇವಲ ಅಕೇಶಿಯಾ ಗಿಡಗಳನ್ನು ಮಾತ್ರ ಬೆಳೆಯಲು ಆಸಕ್ತಿ ತೋರದೇ, ಕಾಡುಮೃಗಗಳಿಗೆ ಅಲ್ಲಿಯೇ ಆಹಾರ ಲಭ್ಯವಾಗಲು ಹಣ್ಣಿನ ಗಿಡಗಳನ್ನು ನೆಡಬೇಕು. ಇಂತಹ ಗಿಡಗಳನ್ನೂ ರೈತರಿಗೆ ನೆಡಲು ಕೊಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹಾರೂಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಕೆಡಿಪಿ ಸಲಹಾ ಸಮಿತಿ ಸದಸ್ಯ ದಿವಾಕರ ಹೆಗಡೆ ತೊಣ್ಣೆಮನೆ ಸೇರಿದಂತೆ ಸ್ಥಳೀಯರು ಇದ್ದರು. ಇದೇ ವೇಳೆ ಮಂಗಗಳು ತಿಂದು ಖಾಲಿ ಮಾಡಿದ ಬಾಳೆಗೊನೆಗಳನ್ನು ರೈತರು ಅರಣ್ಯ ಇಲಾಖೆಗೆ ಉಡುಗೊರೆಯಾಗಿ ನೀಡಿದರು.