ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಮೂಲಕ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಸರ್ಕಾರಕ್ಕೆ ಕಾರ್ಖಾನೆಯನ್ನು ಸಮರ್ಥವಾಗಿ ನಡೆಸುವ ತಾಕತ್ತಿಲ್ಲ. ಅಧಿಕಾರದಲ್ಲಿರುವವರಿಗೆ ಸಕಾಲಕ್ಕೆ ಕಾರ್ಖಾನೆಯನ್ನು ಆರಂಭಿಸಿ ಕ್ರಮಬದ್ಧವಾಗಿ ಕಬ್ಬು ಅರೆಯುವ ಯೋಗ್ಯತೆ ಇಲ್ಲ. ಕಬ್ಬು ಬೆಳೆಗಾರರಿಗೆ ತೊಂದರೆ ನೀಡುತ್ತಿರುವ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿದರೆ ಅವರಾದರೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದಷ್ಟು ಬೇಗ ರಾಜ್ಯಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರ ಮಾಡಲಿ ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಪತ್ರ ಸಮರ್ಪಿಸಿದರು.
ಕಾರ್ಖಾನೆಗೆ ದಶಕಗಳಿಂದ ಗ್ರಹಣ ಹಿಡಿದಿದೆ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗೆ ಪ್ರತಿ ವರ್ಷ ಸಾರ್ವಜನಿಕರ ಹಣ ಬಿಡುಗಡೆಯಾಗುತ್ತಿದೆ. ಸುಖಾಸುಮ್ಮನೆ ಜನರ ತೆರಿಗೆ ಹಣ ವ್ಯಯವಾಗುತ್ತಿದೆ. ಕಬ್ಬು ಬೆಳೆದ ರೈತನಿಗೆ ಬೆಲೆಯಿಲ್ಲದಂತಾಗಿ ಈ ಪ್ರದೇಶದ ಕಬ್ಬು ಬೆಳೆಗಾರರಾದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾತನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಎಸ್.ರವಿ ದೂರಿದರು.ಕಬ್ಬು ಬೆಳೆಗಾರರಾದ ನಮ್ಮದು ಕಬ್ಬು ತರುವುದಷ್ಟೇ ಕೆಲಸ. ಅರೆಯುವುದು ಕಾರ್ಖಾನೆ ಆಡಳಿತ ಮಂಡಳಿಯವರ ಕರ್ತವ್ಯ. ಬಾಯ್ಲಿಂಗ್ ಹೌಸ್ ಸರಿಯಾಗಿಲ್ಲ, ಚೈನ್ ಕ್ಯಾರಿಯರ್ ರಿಪೇರಿಯಾಗಬೇಕು ಎಂಬ ತಾಂತ್ರಿಕ ಕಾರಣಗಳು ಬೆಳೆಗಾರರಿಗೆ ಏಕೆ ಬೇಕು. ನಿಮ್ಮಿಂದ ಕಾರ್ಖಾನೆ ಮುನ್ನಡೆಸಲಾಗದಿದ್ದರೆ ಖಾಸಗಿಯವರಿಗೆ ವಹಿಸಿಬಿಡಿ. ಅವರಾದರೂ ಸಕಾಲಕ್ಕೆ ಕಾರ್ಖಾನೆಯನ್ನು ಆರಂಭಿಸಿ ರೈತರಿಗೆ ಹಣ ಕೊಡುತ್ತಾರೆ ಎಂದು ಒತ್ತಾಯಿಸಿದರು.
ಮಂಡ್ಯ ತಾಲೂಕಿನಲ್ಲಿ ಪ್ರಸ್ತುತ ೬ ರಿಂದ ೮ ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದು, ಸಕ್ಕರೆ ಕಾರ್ಖಾನೆ ಅವ್ಯವಸ್ಥೆಯಿಂದಾಗಿ ಸಕಾಲದಲ್ಲಿ ಕಬ್ಬು ಕಟಾವಾಗದೆ ರೈತರಾದ ನಾವು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಪ್ರತಿ ವರ್ಷ ಸರ್ಕಾರದಿಂದ ಅನುದಾನ ಪಡೆದು ಕೇವಲ ೧ ರಿಂದ ೨ ಲಕ್ಷ ಟನ್ ಕಬ್ಬು ನುರಿಸಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಕಬ್ಬು ಅರೆಯಲಾಗದೆ ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗದೆ ಎಲ್ಲಾ ರೀತಿಯಲ್ಲೂ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ಕ್ರಮಬದ್ಧವಾಗಿ ಕಬ್ಬನ್ನು ಅರೆದು ೨೪ ಗಂಟೆಯೊಳಗೆ ರೈತರ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಮೈಷುಗರ್ ಕಾರ್ಖಾನೆಗೆ ಕಬ್ಬು ಪೂರೈಸಿ ತಿಂಗಳಾದರೂ ಈವರೆಗೆ ಯಾವೊಬ್ಬ ರೈತರ ಖಾತೆಗೆ ಹಣ ಬಂದಿಲ್ಲ ಎಂದು ಆರೋಪಿಸಿದರು.
ಕಾರ್ಖಾನೆಯ ಬಾಯ್ಲಿಂಗ್ ಹೌಸ್ ದುರಸ್ತಿಯಾಗದಿದ್ದ ಮೇಲೆ ಕಾರ್ಖಾನೆಯನ್ನು ಏಕೆ ಆರಂಭಿಸಬೇಕಿತ್ತು. ಅದು ಸಾಮಾನ್ಯಜ್ಞಾನವಲ್ಲವೇ? ಡಿಸೆಂಬರ್‌ನಲ್ಲೇ ನಿಂತ ಕಾರ್ಖಾನೆಯನ್ನು ಜುಲೈ ತಿಂಗಳವರೆಗೆ ಯಂತ್ರೋಪಕರಣಗಳ ದುರಸ್ತಿ ಮಾಡಿಕೊಳ್ಳದಿದ್ದುದೇಕೆ? ಸರ್ಕಾರ ಕೊಟ್ಟ ೧೦ ಕೋಟಿ ರು. ಏನಾಯಿತು? ಆರ್.ಬಿ.ಟೆಕ್ ಕಂಪನಿಗೆ ಮುಂಗಡವಾಗಿ ೧೪ ಕೋಟಿ ರು. ಪಾವತಿಸಿದ ಉದ್ದೇಶವೇನು? ಅದೇ ಹಣವನ್ನು ಕಬ್ಬು ಪೂರೈಸಿದ ರೈತರಿಗೆ ಕೊಡಬಹುದಾಗಿತ್ತಲ್ಲವೇ ಎಂದೆಲ್ಲಾ ಟೀಕಿಸಿದರು.ಕಬ್ಬು ಬೆಳೆಗಾರ ಮಹೇಶ್ ಕೊತ್ತತ್ತಿ ಮಾತನಾಡಿ, ನಾಲ್ಕೈದು ವರ್ಷಗಳ ಹಿಂದೆ ಇದೇ ರೀತಿ ಸಹಕಾರಿ- ಸರ್ಕಾರಿ ವ್ಯವಸ್ಥೆಯಿಂದ ಪಕ್ಕದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದಾಗ ನಿರಾಣಿ ಷುಗರ್ಸ್ ಕಂಪನಿಯವರು ವಹಿಸಿಕೊಂಡು ಒಂದೇ ವರ್ಷದಲ್ಲಿ ಕಾರ್ಖಾನೆಯ ವ್ಯವಸ್ಥೆಗಳನ್ನೆಲ್ಲಾ ಸರಿಪಡಿಸಿ, ರೈತರ ಕಬ್ಬು ಸಕಾಲದಲ್ಲಿ ಕಟಾವಾಗಿ ಸರಿಯಾದ ಸಮಯದಲ್ಲಿ ಕಬ್ಬು ಅರೆದು ಹಣ ಪಾವತಿಸುತ್ತಿರುವ ಜೀವಂತ ಉದಾಹರಣೆ ನಮ್ಮ ಕಣ್ಣೆದುರಿನಲ್ಲಿದೆ. ಮೈಷುಗರ್‌ಗಿಂತಲೂ ಕೆಟ್ಟ ಸ್ಥಿತಿಯಲ್ಲಿದ್ದ ಪಿಎಸ್‌ಎಸ್‌ಕೆಗೆ ಮೂರೇ ತಿಂಗಳಲ್ಲಿ ಮರುಜೀವ ನೀಡಿ ರೈತರಿಗೆ ಉಪಕಾರಿಯಾಗುವಂತೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಮೈಷುಗರ್‌ಗೆ ಎಷ್ಟೇ ಹಣ ಕೊಟ್ಟರೂ ಅದು ಕಳ್ಳರ ಪಾಲಾಗುತ್ತಿದೆಯೇ ಹೊರತು ಕಾರ್ಖಾನೆ ಪ್ರಗತಿಗೆ ಬಳಕೆಯಾಗುತ್ತಿಲ್ಲ ಎಂದು ಜರಿದರು.
ಮೈಷುಗರ್ ಖಾಸಗೀಕರಣವಾಗುವುದನ್ನು ನಾವೆಲ್ಲರೂ ಪಕ್ಷಾತೀತವಾಗಿ ಬೆಂಬಲಿಸುತ್ತೇವೆ. ಕಾರ್ಖಾನೆಯನ್ನು ವ್ಯವಸ್ಥಿತವಾಗಿ ನಡೆಸಿ ಸಕಾಲದಲ್ಲಿ ಹಣ ಪಾವತಿಸುವಂತಹ ಖಾಸಗಿ ಸಂಸ್ಥೆಗೆ ವಹಿಸಿದಲ್ಲಿ ಈ ಭಾಗದ ಕಬ್ಬು ಬೆಳೆಗಾರರು, ಕಬ್ಬು ಕಟಾವುದಾರರು ಹಾಗೂ ಸಾಗಾಣಿಕೆದಾರರಿಗೆ ನಿರಂತರ ಉದ್ಯೋಗ ಮತ್ತು ಸಂಪಾದನೆಗೆ ದಾರಿಯಾಗಲಿದೆ. ಆದ ಕಾರಣ ಕೂಡಲೇ ರಾಜ್ಯಸರ್ಕಾರ ಕಬ್ಬು ಬೆಳೆಗಾರರ ಬದುಕು ಹಸನಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಒಕ್ಕೋರಲಿನಿಂದ ಮನವಿ ಮಾಡುವುದಾಗಿ ಹೇಳಿದರು.ಪ್ರತಿಭಟನೆಯಲ್ಲಿ ಶ್ರೀಕಾಂತ್, ಗಿರೀಶ್, ವಿಕಾಸ್, ಪವನ್, ಮಹದೇವಯ್ಯ, ದ್ಯಾವಣ್ಣ, ಕುಮಾರ್, ಬಿ.ಕೆ.ಸತೀಶ, ನಂಜುಂಡಯ್ಯ ಸೇರಿದಂತೆ ಇತರರಿದ್ದರು.