ಸಾರಾಂಶ
ವಿಶೇಷ ವರದಿ
ಮುಳಗುಂದ: ಕಳೆದ ಒಂದೂವರೆ ದಶಕದ ಹಿಂದೆ ನಿರ್ಮಾಣವಾದ ಸಮೀಪದ ಇನಾಂ ವೆಂಕಟಾಪುರ ಕ್ರಾಸ್‌ನಿಂದ ಕಬಲಾಯತಕಟ್ಟಿ ಸಂಪರ್ಕಿಸುವ ಡಂಬಳ ರಸ್ತೆ ಸಂಪೂರ್ಣ ಹದಗೆಟ್ಟುಹೋಗಿದೆ.ರೈತರ ಹೊಲಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿತ್ಯ ರಸ್ತೆಯಲ್ಲಿ ಸಂಚರಿಸುವವರು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಈ ರಸ್ತೆ ವೆಂಕಟಾಪುರ ಕ್ರಾಸ್‌ನಿಂದ 5 ಕಿಮೀ ವರೆಗೂ ಸಂಪೂರ್ಣ ಹಾಳಾಗಿದೆ. ಡಾಂಬರ್ ಕಿತ್ತು, ಮೆಟ್ಲಿಂಗ್‌ಗೆ ಬಳಸಿದ 40 ಎಂಎಂ ಖಡಿ ಎದ್ದು, ರಸ್ತೆ ಮೇಲೆ ಸಂಚರಿಸುವ ಸ್ಥಿತಿ ಇಲ್ಲ.ದನಕರುಗಳಿಗೆ ಕಾಲುಬೇನೆ: ಈ ಮಾರ್ಗದಲ್ಲಿ ಹೊಲಗಳಿರುವ ರೈತರ ದನಕರುಗಳು ಹೊಲಕ್ಕೆ ಹೋಗಲು ಹಿಂದೇಟು ಹಾಕುವಂತಾಗಿದೆ. ದನ-ಕರಗಳು ಕಲ್ಲು ತುಳಿದು ಕಾಲು ನೋವಿನಿಂದ ಬಳಲುವಂತಾಗಿದೆ. ಇದರಿಂದ ರೈತರು ನೊಂದುಕೊಳ್ಳುತ್ತಿದ್ದಾರೆ. ಯಲಿಶಿರುಂಜ ಗ್ರಾಮದ ಬಹಳಷ್ಟು ರೈತರ ಹೊಲಗಳು ಇದೇ ರಸ್ತೆಯಲ್ಲಿವೆ. ಆಳುಗಳು ಇಲ್ಲಿಗೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ. ಹೊಲದ ಕೆಲಸ ಮಾಡಿಸುವುದೂ ಕಷ್ಟವಾಗಿದೆ ಎನ್ನುತ್ತಾರೆ.
ಈ ರಸ್ತೆ ಮೇಲೆ ಬೈಕ್ ಸವಾರರು ಹೋಗಬೇಕೆಂದರೂ ಹರಸಾಹಸ ಮಾಡಬೇಕು. ಸ್ವಲ್ಪ ಆಯಾ ತಪ್ಪಿದರೂ ಕೈ, ಕಾಳು ಮುರಿಯುವುದಂತೂ ಗ್ಯಾರಂಟಿ.ರಸ್ತೆ ಕಾಮಗಾರಿ ಮುಗಿದ ಆನಂತರ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರ ಒಂದು ದಿನವೂ ಇತ್ತ ಕಡೆ ತಿರುಗಿ ನೋಡಲೇ ಇಲ್ಲ. ನಡೆಯುವ ಅಪಘಾತಗಳಿಗೆ ಯಾರು ಹೊಣೆ ಎಂದು ರೈತರು ಕೇಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಕಾಮಗಾರಿ ಮಾಡಿಸದೆ ಹೋದರೆ ಸರ್ಕಾರದ ವಿರುದ್ಧ ಹೋರಾಡಬೇಕಾಗುತ್ತದೆ ಎಂದು ಈ ಭಾಗದ ರೈತರಾದ ಮೈಲಾರಪ್ಪ ಬೋರಣ್ಣವರ, ನೀಲಪ್ಪ ವಗ್ಗರ, ಪರಶುರಾಮ ತಳವಾರ, ಈಶಪ್ಪ ಹಳ್ಳಿ, ಆನಂದಪ್ಪ ಮಜ್ಜೂರ, ಮಲ್ಲಪ್ಪ ಓಲೇಕಾರ, ಚನಬಸಪ್ಪ ಹೊನ್ನಪ್ಪನವರ ಹಾಗೂ ಇತರರು ಎಚ್ಚರಿಸಿದ್ದಾರೆ.ಹೋರಾಟ: ಈಗಂತೂ ರಸ್ತೆಗೆ ಬಳಸಿದ ಖಡಿ ಹೊರಬಂದು ದನ-ಕರುಗಳು ಈ ರಸ್ತೆಯ ಮೇಲೆ ಹೋಗಲಾರದಂತಾಗಿದೆ. ದನ-ಕರುಗಳಿಗೆ ಕಾಲುಬೇನೆ ಬಂದು ಕುಂಟುತ್ತಾ ಸಾಗುತ್ತವೆ. ಈ ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇವೆ. ಸಾಕಷ್ಟು ಬಾರಿ ಸಚಿವರ ಗಮನಕ್ಕೂ ತಂದಿದ್ದೇವೆ. ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ಇನ್ನು ಮುಂದೆ ದುರಸ್ತಿ ಮಾಡದಿದ್ದರೆ ಹೋರಾಟಕ್ಕಿಳಿಯಬೇಕಾದೀತು ಎಂದು ಯಲಿಶಿರುಂಜ ರೈತ ನಿಂಗಪ್ಪ ಶಿ. ಉಪ್ಪಾರ ಹೇಳಿದರು.