ತುಬಚಿ-ಬಬಲೇಶ್ವರ ನೀರೆತ್ತದಂತೆ ರೈತರ ಆಗ್ರಹ

| Published : Mar 22 2025, 02:05 AM IST

ಸಾರಾಂಶ

ತುಬಚಿ- ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ರೈತರು ವಿಜಯಪುರ- ಬೆಳಗಾವಿ ಜಿಲ್ಲಾ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತುಬಚಿ- ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ರೈತರು ವಿಜಯಪುರ- ಬೆಳಗಾವಿ ಜಿಲ್ಲಾ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಚಿಕ್ಕಪಡಸಲಗಿ ಸೇತುವೆ ಹತ್ತಿರದ ಆಲಗೂರು ಗೌಡರಗಡ್ಡೆ ಪ್ರದೇಶದಲ್ಲಿ ಜಮಾಯಿಸಿದ ರೈತರು ಶುಕ್ರವಾರ ಬೆಳಗಿನ 12ರಿಂದ ಸಂಜೆ 5ರವರೆಗೆ ರಸ್ತೆ ತಡೆ ನಡೆಸಿ, ಸಚಿವ ಎಂ.ಬಿ.ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಸಚಿವರು ನೀರೆತ್ತುವುದನ್ನು ನಿಲ್ಲಿಸುವಂತೆ ಆದೇಶ ಹೊರಡಿಸಬೇಕು. ನೀರೆತ್ತುವ ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲಿಯ ರೈತರ ನೀರನ್ನು ಕಸಿದು ತಮ್ಮ ಕ್ಷೇತ್ರಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಪ್ರತಿವರ್ಷ ನದಿತೀರದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ, ಈಗ ಬೇಸಿಗೆಯ ಸಮಯದಲ್ಲಿ ಇದ್ದನೀರು ಕಸಿದು ಒಣಗಿ ಸಾಯುವಂತೆ ಮಾಡಬಾರದೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಮಳೆಗಾಲದಲ್ಲಿ ಪ್ರವಾಹದ ಭೀತಿಯಿಂದ ಜಾನುವಾರುಗಳ ಸಮೇತ ಇದ್ದ ಸ್ಥಳವನ್ನು ಬಿಟ್ಟು ವಲಸೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಅನುಷ್ಠಾನಗೊಳಿಸಿ ಇಲ್ಲಿಯ ರೈತರಿಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸವಾಗಬೇಕಿದೆ. ಯಾವೊಬ್ಬ ಜನಪ್ರತಿನಿಧಿಯಾಗಲಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರೈತರ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಇಲ್ಲಿಯವರೆಗೆ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ವಿಫಲವಾಗಿವೆ. ಜನ ಪ್ರತಿನಿಧಿಗಳಾದವರು ಸ್ವಾರ್ಥ ಸಾಧಿಸುವ ಕೆಲಸ ಮಾಡಬಾರದು. ಎಲ್ಲರ ಹಿತ ಕಾಯುವ ಕೆಲಸಮಾಡಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.

ತಹಸೀಲ್ದಾರ್‌ ಸದಾಶಿವ ಮಕ್ಕೊಜಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವ ಯತ್ನ ನಡೆಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧಿಕಾರಿ ಎಎಸ್‌ಪಿ ಪ್ರಸನ್ನಕುಮಾರ ದೇಸಾಯಿ, ಡಿವೈಎಸ್‌ಪಿ, ಸೈಯದ್‌ ರೋಶನ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ. ಪಿಎಸ್‌ಐಗಳಾದ ಅನೀಲ ಕುಂಬಾರ, ಪೂಜಾರ, ಸಾವಳಗಿ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ. ಸರ್ಕಾರ ಕೂಡಲೇ ನೀರೆತ್ತುವುದನ್ನು ನಿಲ್ಲಿಸದೇ ಹೋದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ರೈತ ಮುಖಂಡರಾದ ಬಸವರಾಜ ಸಿಂಧೂರ, ಯೋಗಪ್ಪ ಸೌದಿ, ಬಿದರಿಗ್ರಾಮದ ಪ್ರಸನ್ನ ಜಮಖಂಡಿ, ಸುರೇಶ ಹಂಚಿನಾಳ, ದರೆಪ್ಪ ದಾನಗೌಡ(ಡಿಡಿ), ಮಲ್ಲುದಾನಗೌಡ, ಆಲಗೂರು ಗ್ರಾಮದ ಬಿ.ಟಿ,ಪಾಟೀಲ, ಕವಟಗಿಯ ಅಡಿವೆಪ್ಪ ಚಾಮೊಜಿ, ಅಣ್ಣುಗೌಡ ಪಾಟಿಲ, ರಾಕೇಶ ಪತ್ತಾರ, ಸಿದ್ದು ತುಪ್ಪದ, ಸಿದ್ದು ಅಜ್ಜಣ್ಣವರ, ಹಿರೇಪಡಸಲಗಿಯ ಮಹಾದೇವ ಮೂಡಲಗಿ, ಸಿದ್ದುಗೌಡ ಪಾಟೀಲ, ಮುಂತಾದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.