ಶಿಂಷಾ ಎಡ, ಬಲದಂಡೆ ನಾಲೆಗಳಿಗೆ ನೀರು ಹರಿಸುವಂತೆ ರೈತರ ಆಗ್ರಹ

| Published : Sep 12 2024, 01:49 AM IST

ಸಾರಾಂಶ

ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟೆಗಳು ಹಾಗೂ ಹೂಳನ್ನು ಶೀಘ್ರ ತೆಗೆಸಿ ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಂದು ಕಟ್ಟು ನೀರನ್ನು ಮಾತ್ರ ನಾಲೆಗಳ ಮೂಲಕ ಹರಿಯಲು ಬಿಟ್ಟಿದ್ದಾರೆ. ಆ ನಂತರ ನೀರು ಬಿಡದೆ ಇರುವುದರಿಂದ ಹಾಲಿ ಇರುವ ಬೆಳೆಗಳು ಒಣಗುವ ಹಂತಕ್ಕೆ ಬಂದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶಿಂಷಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ಕೆ.ರಾಮಕೃಷ್ಣ ನೇತೃತ್ವದಲ್ಲಿ ಕಚೇರಿ ಎದುರು ಕಾರ್ಯಕರ್ತರು ಕೆಲ ಕಾಲ ಧರಣಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಕೆಆರ್‌ಎಸ್ ಜಲಾಶಯದಿಂದ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟೆಗಳು ಹಾಗೂ ಹೂಳನ್ನು ಶೀಘ್ರ ತೆಗೆಸಿ ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಂದು ಕಟ್ಟು ನೀರನ್ನು ಮಾತ್ರ ನಾಲೆಗಳ ಮೂಲಕ ಹರಿಯಲು ಬಿಟ್ಟಿದ್ದಾರೆ. ಆ ನಂತರ ನೀರು ಬಿಡದೆ ಇರುವುದರಿಂದ ಹಾಲಿ ಇರುವ ಬೆಳೆಗಳು ಒಣಗುವ ಹಂತಕ್ಕೆ ಬಂದಿದೆ ಎಂದು ರೈತರು ಆರೋಪಿಸಿದರು.

ವಿಶ್ವೇಶ್ವರಯ್ಯ ನಾಲೆ ಮುಖಾಂತರ ನೀರು ಹರಿಸಿ ಕೊಪ್ಪ ಕೆರೆ ಭರ್ತಿ ಮಾಡಬೇಕು. ಅಲ್ಲಿಂದ ಶಿಂಷಾ ನದಿಗೆ ನೀರು ಬಿಡುಗಡೆ ಮಾಡುವುದು ಮತ್ತು ನಾಲಾ ವ್ಯಾಪ್ತಿಯ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ಕೆಆರ್ ಎಸ್ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಮೀನುಗಳಿಗೆ ಅಗತ್ಯವಾಗಿ ನೀರು ಹರಿಸಿ ಬೆಳೆ ರಕ್ಷಣೆಗೆ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರೈತ ಮುಖಂಡರು ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇ ನಾಗರಾಜು ಧರಣಿ ನಿರತ ರೈತರೊಂದಿಗೆ ಮಾತುಕತೆ ನಡೆಸಿದರು. ಶಿಂಷಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸುವ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ನಂತರ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ರೈತ ಮುಖಂಡರು ವರುಣನ ಕೃಪೆಯಿಂದ ಈ ಬಾರಿ ಕೆಆರ್ ಎಸ್ ಜಲಾಶಯ ಭರ್ಥಿಯಾಗಿದ್ದರೂ ಸಹಾ ಕೆರೆ, ಕಟ್ಟೆಗಳಿಗೆ ನೀರು ಹರಿಸಿ ಭರ್ತಿ ಮಾಡುವುದನ್ನು ಬಿಟ್ಟು ತಮಿಳುನಾಡಿಗೆ ಅಗತ್ಯವಿಲ್ಲದಿದ್ದರು ಸಹಾ ನೀರು ಹರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮೊದಲು ಕೆಆರ್ ಎಸ್ ಜಲಾಶಯವ ವ್ಯಾಪ್ತಿಯ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ವಿನೋದ್ ಬಾಬು, ಎಂ.ಎಸ್.ಸಿದ್ದೇಗೌಡ, ಶೆಟ್ಟಹಳ್ಳಿ ರವಿಕುಮಾರ್, ಸಾದೊಳಲು ಸಿದ್ದೇಗೌಡ, ವರದರಾಜು, ಎಚ್.ಎಂ.ಶಿವರಾಮು, ಬಿ.ಕೆ.ಸತೀಶ್, ರಾಮಕೃಷ್ಣ ಸೇರಿದಂತೆ ಹಲವರು ರೈತರು ಬಾಗವಹಿಸಿದ್ದರು.