ರೈತ ತನ್ನ ಹೊಟ್ಟೆಪಾಡು ನಡೆಸಲು ಕಷ್ಟಪಡುವುದಲ್ಲದೇ ತನ್ನ ಬೆನ್ನೆಲುಬಾದ ಜಾನುವಾರುಗಳನ್ನು ಸಾಕಲು ಸಾಧ್ಯವಾಗದೇ ಕೆಲ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ

ಕನಕಗಿರಿ: ಜಿಲ್ಲೆಯಾದ್ಯಂತ ಭೀಕರ ಬರಗಾಲ ಆವರಿಸಿದ್ದು, ಸರ್ಕಾರ ಕೂಡಲೇ ಗೋಶಾಲೆ ಆರಂಭಿಸಲು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್‌ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಡ್ಡಿ ಹುಲ್ಲು ಬೆಳೆಯದೆ ಭೂಮಿ ಬರಡಾಗಿ ನಿಂತಿದೆ. ರೈತ ಬೆಳೆದಿದ್ದ ಪೈರುಗಳು ಸಹ ಒಣಗಿವೆ. ಜಾನುವಾರುಗಳಿಗೆ ಮೇವು ನೀರಿನ ಅಭಾವ ಉಂಟಾಗಿದ್ದು, ರೈತ ತನ್ನ ಹೊಟ್ಟೆಪಾಡು ನಡೆಸಲು ಕಷ್ಟಪಡುವುದಲ್ಲದೇ ತನ್ನ ಬೆನ್ನೆಲುಬಾದ ಜಾನುವಾರುಗಳನ್ನು ಸಾಕಲು ಸಾಧ್ಯವಾಗದೇ ಕೆಲ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳಿಗಾಗಿ ತಾಲೂಕು ಕೇಂದ್ರ ಸೇರಿ ಹೋಬಳಿ ಹಾಗೂ ಪಂಚಾಯತಿವಾರು ಗೋಶಾಲೆ ಆರಂಭಿಸಿ ಮೇವು ನೀರು ಒದಗಿಸಬೇಕು ಎಂದು ಆಗ್ರಹಿಸಿದರಲ್ಲದೇ ಸರ್ಕಾರ ಕಳೆದ ವರ್ಷವೇ ತೋಟದ ಮನೆಗಳಿಗೆ ರಾತ್ರಿಯಿಡಿ ನಿರಂತರ ೨ಫೇಸ್ ವಿದ್ಯುತ್ ಸರಬರಾಜು ಮಾಡಲು ಸೂಚಿಸಿದೆಯಾದರೂ ಅದು ಕೇವಲ ಕಾಗದದಲ್ಲೇ ಉಳಿದುಕೊಂಡಿದೆ. ರೈತರು ರಾತ್ರಿ ಕತ್ತಲಲ್ಲೇ ವಿಷಜಂತುಗಳ ಭಯದಲ್ಲೇ ಜೀವನ ಸಾಗಿಸಬೇಕಾಗಿದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕುಲಕರ್ಣಿ, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದೇಸಾಯಿ, ನಗರ ಘಟಕದ ಅಧ್ಯಕ್ಷ ವೀರೇಶ, ಕಾರ್ಯಾಧ್ಯಕ್ಷ ಲಾಲ್‌ಸಾಬ್ ಜೂಲಕೇರಿ, ಪದಾಧಿಕಾರಿ ಕೃಷ್ಣ ಕಾಕಿ, ನಿಂಗಪ್ಪ ತಿಪ್ಪನಾಳ, ಜಗದೀಶಪ್ಪ ಗದ್ದಿ, ನಾರಾಯಣರೆಡ್ಡಿ, ಹನುಮೇಶ, ನಾಗಪ್ಪ ಕೋರೆಡ್ಡಿ ಇದ್ದರು.