ಕಾಫಿಯಂತಹ ಬೆಳೆಗೆ ಎಫ್‌ಪಿಒ ಸಂಸ್ಥೆಗಳು ಸಹಕಾರ ನೀಡಿದಲ್ಲಿ ಕೃಷಿಕರಲ್ಲಿ ಒಂಟಿತನದ ಮನಸ್ಥಿತಿಯನ್ನು ಹೋಗಲಾಡಿಸಬಹುದು.

ಶಿರಸಿ: ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ ರೈತರ ಅಭಿವೃದ್ಧಿ ಸಾಧ್ಯ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ಗಣೇಶ ಹೆಗಡೆ ಹೇಳಿದರು.

ಶಿರಸಿ ಎಪಿಎಂಸಿ ಆವರಣದಲ್ಲಿರುವ ಟಿಆರ್‌ಸಿ ನೂತನ ಕಟ್ಟಡದಲ್ಲಿ ಟಿಆರ್‌ಸಿ ಹಾಗೂ ಟಿಜಿಎಫ್‌ಸಿಒ ಸಹಯೋಗದಲ್ಲಿ ಆರಂಭಗೊಂಡ ಕಾಫಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕಾಫಿಯಂತಹ ಬೆಳೆಗೆ ಎಫ್‌ಪಿಒ ಸಂಸ್ಥೆಗಳು ಸಹಕಾರ ನೀಡಿದಲ್ಲಿ ಕೃಷಿಕರಲ್ಲಿ ಒಂಟಿತನದ ಮನಸ್ಥಿತಿಯನ್ನು ಹೋಗಲಾಡಿಸಬಹುದು ಎಂದರು.ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಮಾರುಕಟ್ಟೆ ಸಲಹೆಗಾರರಾದ ರಾಘವೇಂದ್ರ ಶಾಸ್ತ್ರಿ ಬಿಳಗಿ ಮಾತನಾಡಿ, ಕೇವಲ ಮಾರ್ಕೆಟಿಂಗ್ ಕುರಿತು ಮಾತ್ರ ಆಸಕ್ತಿ ತೋರಿಸದೆ ರೈತರಿಗೆ ಕಾಫಿ ಬೆಳೆಯಲು ಅಗತ್ಯ ಮಾರ್ಗದರ್ಶನ, ಪ್ರೋತ್ಸಾಹ ನೀಡಿ ಅಗತ್ಯವಿರುವ ಸಾಲ ಸೌಲಭ್ಯವನ್ನೂ ಒದಗಿಸಿ ನಂತರ ರೈತರ ಉತ್ಪಾದನೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಟಿಆರ್‌ಸಿ ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ. ಇದು ಮಾದರಿ ಕಾರ್ಯವಾಗಿದೆ ಎಂದರು.ಪ್ರಗತಿಪರ ಕೃಷಿಕರು ಹಾಗೂ ಟಿಆರ್‌ಸಿ ಕಾಫಿ ಕೃಷಿ ಯೋಜನೆಯ ಸಂಪನ್ಮೂಲ ವ್ಯಕ್ತಿಗಳಾದ ಸೀತಾರಾಮ ಹೆಗಡೆ ನೀರ್ನಳ್ಳಿ ಮಾತನಾಡಿ, ತಾವು ಪ್ರಾರಂಭದಲ್ಲಿ ಕಾಫಿ ಕೃಷಿ ಕೈಗೊಂಡ ಸಮಯದಲ್ಲಿ ಕಾಫಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲದೆ ಪರದಾಡುವಂತಾಗಿತ್ತು. ನಂತರ ಆ ಸಮಯದಲ್ಲಿ ಕಾಫಿ ಗಿಡಗಳನ್ನು ನಾಶಪಡಿಸಿದ್ದೆ. 2020ರ ನಂತರ ಸ್ಥಳೀಯವಾಗಿ ಕಾಫಿಗೆ ಮಾರುಕಟ್ಟೆ ಸೌಲಭ್ಯ ಸುಧಾರಿಸಿದೆ ಎಂದರು.ಅಧ್ಯಕ್ಷತೆ ವಹಿಸಿದ ಟಿಆರ್‌ಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ನಮ್ಮ ಸಂಘವು ರೈತರ ಆದಾಯ ವೃದ್ಧಿಗಾಗಿ ಕಾಫಿ ಕೃಷಿ ಯೋಜನೆಯನ್ನು ಮಾದರಿ ಯೋಜನೆಯಾಗಿ ಕಾರ್ಯರೂಪಕ್ಕೆ ತಂದಿದೆ. ಕೆಲಸಗಾರರ ಕೊರತೆ ಇದ್ದಲ್ಲಿ ಕೆಲಸಗಾರರನ್ನು ನಾವೇ ಪೂರೈಸುತ್ತೇವೆ ಎಂದರು.ಕೃಷಿ ವೈಜ್ಞಾನಿಕ ಸಲಹೆಗಾರ ವಿ.ಎಂ. ಹೆಗಡೆ ಶಿಂಗನಮನೆ ಮಾತನಾಡಿ, ನಮ್ಮ ಪ್ರದೇಶದಲ್ಲಿ ಅಡಕೆಯ ಜತೆ ಕಾಳುಮೆಣಸು ಹಾಗೂ ಕಾಫಿ ಉತ್ತಮ ಹೊಂದಾಣಿಕೆ ಬೆಳೆಯಾಗಿದೆ. ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಕಾಫಿ ಕೃಷಿ ಕೈಗೊಂಡಲ್ಲಿ ಮುಂಬರುವ ದಿನದ ಆಶಾದಾಯಕ ಬೆಳೆಯಾಗಿ ಕಾಫಿ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದರು,ಟಿಆರ್‌ಸಿ ಹಾಗೂ ಟಿಜಿಎಫ್‌ಸಿಒ ನಿರ್ದೇಶಕ ಸಂತೋಷಕುಮಾರ ಗೌಡರ್ ಮಾತನಾಡಿ, ಎಲೆಚುಕ್ಕಿ ಹಾಗೂ ಕೊಳೆ ರೋಗದಿಂದ ಮತ್ತು ಅಡಕೆ ಬೆಳೆಯ ಕ್ಷೇತ್ರ ವಿಸ್ತರಣೆ ಕಾರಣದಿಂದಾಗಿ ಅಡಕೆ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ಮೂಡಿದೆ ಎಂದರು.ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಶ್ರೀಧರ ಹೆಗಡೆ ಕಡವೆ ಮಾತನಾಡಿ, ರೈತ ಉತ್ಪಾದಕ ಕಂಪನಿ ಮೂಲಕ ರೈತರಿಗೆ ವಿವಿಧ ಸೌಲಭ್ಯ ಒದಗಿಸಲು ಸಾಧ್ಯವಿದೆ. ನಮ್ಮ ಕಂಪನಿ ಮೂಲಕ ಕಾಫಿ ಖರೀದಿ ಕೇಂದ್ರ ಪ್ರಾರಂಭಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಟಿಜಿಎಫ್‌ಸಿಒ ಮುಖ್ಯಕಾರ್ಯನಿರ್ವಾಹಕ ನಾಗರಾಜ ಭಟ್ಟ ಕಳವೆ ಸ್ವಾಗತಿಸಿದರು. ಪ್ರಸಾದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಟಿಜಿಎಫಿಸಿಒ ನಿರ್ದೇಶಕರಾದ ಶ್ರೀಧರ ಹೆಗಡೆ ಜಡ್ಡಿಮನೆ ವಂದಿಸಿದರು.