ಸಾರಾಂಶ
ವನೂರು ಗ್ರಾಮದ ಕೆರೆ 2 ವರ್ಷಗಳ ಬಳಿಕ ಭರ್ತಿಯಾದ ಹಿನ್ನೆಲೆ ದೇವನೂರು ಕೆರೆಗೆ ಬಾಗಿನ ಅರ್ಪಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರೈತರಿಗೆ ಯಾವುದೇ ಜಾತಿಯೂ ಇಲ್ಲ ಹಾಗೆ ಪಕ್ಷವೂ ಇಲ್ಲ. ರೈತರೇ ಒಂದು ಜಾತಿ ಹಾಗೂ ಪಕ್ಷ. ದೇಶದಲ್ಲಿ ಶೇ. 70 ರಷ್ಟಿರುವ ರೈತರು ಸಮೃದ್ಧಿ ಯಾಗಿರಬೇಕು. ಮಳೆ ಬಂದು ಉತ್ತಮ ಬೆಳೆ ಜೊತೆಗೆ ಬೆಳೆಗೆ ಉತ್ತಮ ಬೆಲೆಯೂ ಸಿಕ್ಕಾಗ ರೈತ ಸರ್ಕಾರದ ಯಾವುದೇ ಯೋಜನೆ ಗಳನ್ನು ಕೇಳುವುದಿಲ್ಲ. ಈ ಬಾರಿ ಮನುಷ್ಯ ಪ್ರಯತ್ನ ಮತ್ತು ದೈವ ಪ್ರಯತ್ನದಿಂದ ಕ್ಷೇತ್ರದ ಬರಗಾಲ ಪೀಡಿತ ಹೋಬಳಿಗಳಾದ ಲಕ್ಯಾ ಹಾಗೂ ಸಖರಾಯಪಟ್ಟಣ ಭಾಗದ ಕೆರೆಗಳು ಭರ್ತಿಯಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ದೇವನೂರು ಗ್ರಾಮದ ಕೆರೆ 2 ವರ್ಷಗಳ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮನುಷ್ಯ ಪ್ರಯತ್ನಕ್ಕಿಂತ ದೈವ ಪ್ರಯತ್ನವೇ ಮುಖ್ಯ. ದೈವದ ಆಶೀರ್ವಾದ ಇದ್ದಾಗ ಮಾತ್ರ ಮಳೆ ಬಂದು ಈ ಭಾಗದ ಕೆರೆಗಳು ತುಂಬಿದ್ದವು. ದೇವನೂರು ಕೆರೆ 2010, 2011 ಹಾಗೂ 2022 ರಲ್ಲಿ ಮಾತ್ರ ಭರ್ತಿಯಾಗಿತ್ತು. ಈ ಬಾರಿ ಕೆರೆ ತುಂಬಿದ್ದರಿಂದ ರೈತರ ಮುಖದಲ್ಲಿ ಸಂತಸ ಕಾಣುತ್ತಿದೆ ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೀಗ ಅವರೇ ಮತ್ತೆ ಸಿಎಂ ಆದ ವೇಳೆ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಿಂದ ಹಳೆಬೀಡು, ಬೆಳವಾಡಿ ಹಾಗೂ ದೇವನೂರು ಕೆರೆಗಳು ಭರ್ತಿಯಾಗಿವೆ ಎಂದು ತಿಳಿಸಿದರು.
ಭದ್ರ ಉಪ ಕಣಿವೆ ಯೋಜನೆ ಹಾಗೂ ರಣಘಟ್ಟ ಯೋಜನೆಗಳು ಜಾರಿಯಾದರೆ ಕ್ಷೇತ್ರದ 61 ಕೆರೆಗಳು ಭರ್ತಿಯಾಗಲಿವೆ. ಇನ್ನೂ ಒಂದೆರಡು ವರ್ಷಗಳ ಒಳಗಾಗಿ ಈ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಗವಂತನ ಕೃಪೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲ್ಲಾಡುವುದಿಲ್ಲ. ಈ ಬಾರಿ ದೇವರ ಕೃಪೆಯಿಂದ ರಾಜ್ಯಾದ್ಯಂತ ಕೆರೆಕಟ್ಟೆಗಳು ಭರ್ತಿಯಾಗಿವೆ. ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಮೂರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
₹1281 ಕೋಟಿ ವೆಚ್ಚದಲ್ಲಿ ಭದ್ರ ಉಪ ಕಣಿವೆ ಯೋಜನೆ, ರಣಘಟ್ಟ ಯೋಜನೆ ಹಾಗೂ ಕರಗಡ ಏತ ನೀರಾವರಿ ಯೋಜನೆಯಿಂದ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.ಕೆರೆ ತುಂಬಿದಾಗ ಜನರ ಮುಖದಲ್ಲಿ ಕಾಣುವ ಹರ್ಷ ಕೋಟಿ ರು. ಕೊಟ್ಟರೂ ಸಿಗುವುದಿಲ್ಲ. ಭೂಮಿ ತಾಯಿಯನ್ನು ಬಿಟ್ಟು ನಾವು ಬದುಕಲು ಸಾಧ್ಯ ವಿಲ್ಲ. ಯಾವುದೇ ಶುಭ ಕಾರ್ಯ ಮಾಡುವಾಗಲೂ ಭೂಮಿಯನ್ನು ಪೂಜೆ ಮಾಡುತ್ತೇವೆ. ಈ ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ. ಜೊತೆಗೆ ಯಾವುದೇ ಶುಭ ಕಾರ್ಯದ ವೇಳೆಯೂ ಗಂಗೆಯನ್ನು ತರುತ್ತೇವೆ. ಹೀಗಾಗಿಯೇ ಕೆರೆಗಳು ತುಂಬಿದಾಗ ಬಾಗಿನ ಅರ್ಪಿಸಿ ಬದುಕಿನಲ್ಲಿ ನಿನ್ನಿಂದಲೇ ಎಲ್ಲವೂ ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಟ್ಟ ತಾಯಿ ನೀನು ಎಂದು ಕೃತಜ್ಞತೆಯಿಂದ ಸ್ಮರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಮಹಡಿಮನೆ ಸತೀಶ್, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ಪ್ರಮುಖರಾದ ಹೇಮಾವತಿ, ನಟರಾಜ್, ಅಶೋಕ, ದೀಪಾ ದಕ್ಷಿಣಾಮೂರ್ತಿ ಇದ್ದರು.20 ಕೆಸಿಕೆಎಂ 5ದೇವನೂರು ಕೆರೆ ಭರ್ತಿಯಾಗಿರುವ ಹಿನ್ನಲೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಭಾನುವಾರ ಬಾಗಿನ ಅರ್ಪಣೆ ಮಾಡಿದರು. ಬಿ.ಎಚ್. ಹರೀಶ್, ವಿಜಯಕುಮಾರ್, ಮಹಡಿಮನೆ ಸತೀಶ್ ಹಾಗೂ ಗ್ರಾಮಸ್ಥರು ಇದ್ದರು.