ಸೆ. 13 ರಿಂದ ನಾಲ್ಕು ದಿನಗಳ ಕಾಲ ರೈತರ ಜಾತ್ರೆ

| Published : Sep 05 2025, 01:00 AM IST

ಸೆ. 13 ರಿಂದ ನಾಲ್ಕು ದಿನಗಳ ಕಾಲ ರೈತರ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯ ಆಧುನಿಕ ತಂತ್ರಜ್ಞಾನಗಳು, ಅನ್ವೇಷಣೆಗಳು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ಮೇಳದ ಉದ್ದೇಶ. ಮೇಳದಲ್ಲಿ 20 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದ್ದು, ಮುಖ್ಯ ವೇದಿಕೆ ಹಾಗೂ ರೈತರ ಜ್ಞಾನಾಭಿವೃದ್ಧಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಧಾರವಾಡ: ರೈತರ ಜಾತ್ರೆ ಎಂದೇ ಕರೆಯುವ ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿ ಮೇಳ ಈ ಬಾರಿ ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು ಘೋಷವಾಕ್ಯದಡಿ ಸೆ. 13 ರಿಂದ 16ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ, ಕೃಷಿಯ ಆಧುನಿಕ ತಂತ್ರಜ್ಞಾನಗಳು, ಅನ್ವೇಷಣೆಗಳು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ಮೇಳದ ಉದ್ದೇಶ. ಮೇಳದಲ್ಲಿ 20 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದ್ದು, ಮುಖ್ಯ ವೇದಿಕೆ ಹಾಗೂ ರೈತರ ಜ್ಞಾನಾಭಿವೃದ್ಧಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಮೇಳದ ವಿಶೇಷತೆಗಳು: ಫಲಪುಷ್ಪ, ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ, ಸುಸ್ಥಿರತೆಗಾಗಿ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಕೃಷಿ, ಸಾಂಪ್ರದಾಯಿಕ ತಳಿಗಳು, ಕೃಷಿಯಲ್ಲಿ ಕೃತಕ ಬುದ್ದಿಮತ್ತೆ, ಕನ್ನಡ ಕೃಷಿ ಗೋಷ್ಠಿ, ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಹಾಗೂ ಪೌಷ್ಟಿಕ ಆಹಾರ ಭದ್ರತೆ ಅಂತಹ ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ನಾಲ್ಕು ದಿನಗಳ ಕಾಲ ರೈತರಿಂದ ರೈತರಿಗಾಗಿ ಕಾರ್ಯಕ್ರಮ ನಡೆಯಲಿದೆ. ನಿತ್ಯ ಪ್ರಾಯೋಗಿಕ ತಾಕುಗಳ ವೀಕ್ಷಣೆ, ತಜ್ಞರಿಂದ ಕೃಷಿ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ, ಗಡ್ಡೆ- ಗೆಣಸು ಪ್ರದರ್ಶನಗಳು ನಡೆಯಲಿವೆ ಎಂದು ಡಾ. ಪಾಟೀಲ ತಿಳಿಸಿದರು.

ಪ್ರತಿದಿನ ಮಧ್ಯಾಹ್ನ 2.30ಕ್ಕೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಸೆ. 13ರಂದು ಎಕರೆಗೆ 100 ಟನ್ ಕಬ್ಬು ಇಳುವರಿಗೆ ವಿಶೇಷ ತಾಂತ್ರಿಕತೆಗಳು, ಸೆ. 14ರಂದು ಅಧಿಕ ಇಳುವರಿಗಾಗಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ಸೆ. 15ರಂದು ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು, ಸೆ. 16 ರಂದು ಹೈ-ಟೆಕ್ ತೋಟಗಾರಿಕೆ ತಂತ್ರಜ್ಞಾನ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೃಷಿ ಮೇಳದಲ್ಲಿಯೇ ಮೊದಲ ಬಾರಿಗೆ ಎಲ್ಲ ಮಳಿಗೆಗಳಿಗೂ ಜರ್ಮನ್‌ ಟೆಂಟ್‌ ಮೂಲಕ ಮಳೆಯಿಂದ ರಕ್ಷಿಸಲಾಗುತ್ತಿದೆ ಎಂದ ಅವರು, ಒಟ್ಟಾರೆ 162 ಹೈಟೆಕ್‌, 272 ಸಾಮಾನ್ಯ, 99 ಯಂತ್ರೋಪಕರಣ, 50 ಜಾನುವಾರು, 13 ಕ್ಷೇತ್ರ ಹಾಗೂ 29 ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಕೃಷಿ ಮೇಳದಲ್ಲಿ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳದ ಆವರಣವನ್ನು ವಿಮಾ ವ್ಯಾಪ್ತಿಗೊಳಪಡಿಸಲಾಗಿದೆ. ಅಗ್ನಿಶಾಮಕ ವಾಹನ, ಮೊಬೈಲ್, ಎ.ಟಿ.ಎಂ. ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳ ಭೇಟಿಗಾಗಿ ವಾಹನಗಳ ವ್ಯವಸ್ಥೆ, ವೇದಿಕೆ ಕಾಯಕ್ರಮದ ನೇರ ಪ್ರಸಾರ ವ್ಯವಸ್ಥೆ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಹಾಗೂ ಪೊಲೀಸ್ ಸಹಾಯ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕೃಷಿ ವಿವಿ ಕಳೆದ ವರ್ಷದಲ್ಲಿ ನವಣೆ, ಸಾಮೆ, ಉದುಲು ಸೇರಿದಂತೆ 10 ಹೊಸ ತಳಿಗಳು, 20 ಕೃಷಿ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಿದೆ. ಹಲವು ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿದೆ. ಬೀಜೋತ್ಪಾನೆಯ ಚಟುವಟಿಕೆ ಕೈಗೊಂಡಿದೆ. ಕೃಷಿ ವಿವಿ ಹಾಗೂ ಇಲ್ಲಿಯ ಸಂಶೋಧಕರ ಸಾಧನೆಗೆ ಪುರಸ್ಕಾರಗಳು ಸಂದಿವೆ ಎಂದು ತಿಳಿಸಿದರು.

ಸೆ. 15ರಂದು ಮೇಳಕ್ಕೆ ಚಾಲನೆ: ಸೆ. 14ರಂದು ಭಾನುವಾರ ಬೆಳಗ್ಗೆ 11ಕ್ಕೆ ರಾಜ್ಯಪಾಲರಿಂದ ಬೀಜ ಮೇಳ ಉದ್ಘಾಟನೆಯಾಗಲಿದ್ದು, ನಾಲ್ಕು ದಿನಗಳ ಕಾಲ ಸುಮಾರು 3 ಸಾವಿರ ಕ್ವಿಂಟಾಲ್‌ ಹಿಂಗಾರು ಬಿತ್ತನೆ ಬೀಜ ಮಾರಾಟ ಮಾರುವ ಗುರಿ ಹೊಂದಲಾಗಿದೆ. ಸೆ. 15ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೃಷಿ ಮೇಳವನ್ನು ಅಧಿಕೃತವಾಗಿ ಚಾಲನೆ ನೀಡಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಮಂಡಳಿ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ಕುಲಪತಿ ಡಾ. ಪಿ.ಎಲ್‌. ಪಾಟೀಲ ಹೇಳಿದರು.

ಕೃಷಿ ವಿವಿ ಆವರಣದಲ್ಲಿ ಇತ್ತೀಚೆಗೆ ವಿವಿ ಗಮನಕ್ಕೆ ಬಾರದಂತೆ ನಿರ್ಮಾಣವಾಗಿದ್ದ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿದ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್‌. ಪಾಟೀಲ, ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ಮಾಡಿದ್ದು, ಆದೇಶ ಪಾಲಿಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಮೇಳದ ಅಧ್ಯಕ್ಷರು, ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ, ಆಡಳಿತ ಮಂಡಳಿಯ ಸದಸ್ಯರಾದ ರವಿಕುಮಾರ ಮಾಳಿಗೇರ, ಶ್ರೀನಿವಾಸ ಕೋಟ್ಯಾನ್, ವಿ.ಪಿ. ಪೊಲೀಸಪಾಟೀಲ, ಪಾರ್ವತಿ ಕುರ್ಲೆ ಇದ್ದರು.