ಕಲಾದಗಿಯಲ್ಲಿ ರೈತರ ಹಬ್ಬ ಕಾರಹುಣ್ಣಿಮೆ ಸಂಭ್ರಮ

| Published : Jun 13 2025, 03:19 AM IST

ಸಾರಾಂಶ

ಉತ್ತರ ಕರ್ನಾಟಕದ ರೈತರ ಹಬ್ಬ ಕಾರಹುಣ್ಣಿಮೆಯನ್ನು ರೈತರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಮಳೆಗಾಲ ಪ್ರಾರಂಭದಲ್ಲಿ ಬರುವ ರೈತರ ಮೊದಲ ಹಬ್ಬ ಕಾರಹುಣ್ಣಿಮೆ. ವರ್ಷಪೂರ್ತಿ ದುಡಿಮೆ ಮಾಡುವ ಎತ್ತುಗಳಿಗೆ ರೈತರು ಮೊಟ್ಟೆ ಹಾಗೂ ಎಳ್ಳೆಣ್ಣೆ ಮಿಶ್ರಿತ ವಿಶೇಷ ಆಹಾರವನ್ನು ಗೊಟ್ಟ ಹಾಕಿ ರೈತರು ತಮ್ಮ ಎತ್ತುಗಳ ಆರೋಗ್ಯ ಆರೈಕೆ ಮಾಡಿದ್ದು ವಿಶೇಷವಾಗಿ ಕಂಡು ಬಂತು.

ಕನ್ನಡಪ್ರಭ ವಾರ್ತೆ ಕಲಾದಗಿ

ಉತ್ತರ ಕರ್ನಾಟಕದ ರೈತರ ಹಬ್ಬ ಕಾರಹುಣ್ಣಿಮೆಯನ್ನು ರೈತರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಮಳೆಗಾಲ ಪ್ರಾರಂಭದಲ್ಲಿ ಬರುವ ರೈತರ ಮೊದಲ ಹಬ್ಬ ಕಾರಹುಣ್ಣಿಮೆ. ವರ್ಷಪೂರ್ತಿ ದುಡಿಮೆ ಮಾಡುವ ಎತ್ತುಗಳಿಗೆ ರೈತರು ಮೊಟ್ಟೆ ಹಾಗೂ ಎಳ್ಳೆಣ್ಣೆ ಮಿಶ್ರಿತ ವಿಶೇಷ ಆಹಾರವನ್ನು ಗೊಟ್ಟ ಹಾಕಿ ರೈತರು ತಮ್ಮ ಎತ್ತುಗಳ ಆರೋಗ್ಯ ಆರೈಕೆ ಮಾಡಿದ್ದು ವಿಶೇಷವಾಗಿ ಕಂಡು ಬಂತು.

ರೈತಾಪಿ ವರ್ಗ ಬೆಳಗ್ಗೆಯಿಂದಲೇ ತಮ್ಮ ಮನೆಯಲ್ಲಿ ಎತ್ತುಗಳ, ದನಕರುಗಳ ಮೈತೊಳೆದು ಸಿಂಗಾರ ಮಾಡುವ ಕಾಯಕದಲ್ಲಿ ತೊಡಗಿದ್ದರು. ವಿಶೇಷವಾಗಿ ಎತ್ತು ಮೈತೊಳೆದು ಹಸಿರು, ಹಳದಿ, ಕೇಸರಿ ವಾರ್ನೆಸ್ ಬಣ್ಣ ಹಚ್ಚುವುದು, ಬಣ್ಣ ಬಣ್ಣದ ರಿಬ್ಬನ್ ಕಟ್ಟುವುದು, ಮೈತುಂಬಾ ಬಣ್ಣದ ಚುಕ್ಕಿ ಇಡುವುದು, ಕೊರಳಿಗೆ, ಹೊಸ ಹಗ್ಗ ಹೂವಿನ ಗೊಂಡೆ, ಗೆಜ್ಜೆ ಸರ, ಜತಗಿ ಬಾರ, ಲಡ್ಡ, ಉಬ್ಬಿಸಿದ ಉಬ್ಬು ಕಟ್ಟಿ ಶೃಂಗಾರ ಮಾಡಿದರು. ನಂತರ ಪೂಜೆ ಸಲ್ಲಿಸಿ ಅವುಗಳಿಗೆ ಕಡಬು ಕರ್ಚಿಕಾಯಿ ತಿನ್ನಿಸಿದರು. ಶೃಂಗರಿಸಿದ ಎತ್ತುಗಳನ್ನು ಊರ ಅಗಸಿ ಮುಂದೆ ಓಡಿಸಿಕೊಂಡು ಬಂದರು. ಹೀಗೆ ಅಲಂಕಾರಗೊಳಿಸಿದ ಎತ್ತುಗಳ ಕೊರಳಿಗೆ ಕೋಡು ಬಳೆ, ಚಕ್ಕಲಿ, ಪಾಪಡಿ ಚೀಲ, ₹10 ನೋಟು, ಕಟ್ಟಿ ಅಗಸಿಯಲ್ಲಿ ಓಡಿಸಿಕೊಂಡು ಬರುವ ಸಮಯದಲ್ಲಿ ಯುವಕರು ತಿನಿಸು ಖಾದ್ಯವನ್ನು ಎತ್ತುಗಳ ಕೊರಳಿನಿಂದ ಕಿತ್ತು ಹರಿದುಕೊಂಡು ಹಂಚಿ ತಿಂದು ಸಂಭ್ರಮಿಸಿದರು. ಇದನ್ನು ನೊಡಲೆಂದೇ ಗ್ರಾಮದ ಜನರು ಅಗಸಿಯ ಮುಂದೆ, ಮನೆ ಮಾಳಗಿ ಮೇಲೆ ಏರಿ ನೋಡಿ ಖುಷಿಪಟ್ಟರು.

ಕಲಾದಗಿಯಲ್ಲಿ ಕರಿ:

ಸಿಂಗರಿಸಿದ ಕೆಂದು ಎತ್ತುಗಳನ್ನು ಹೊಸೂರ ಚೌಕ ಬಳಿ ಕರೆತಂದ ಎತ್ತುಗಳನ್ನು ಪೂಜೆ ಮಾಡಿ ತೆಂಗಿನಕಾಯಿ ಒಡೆದು ಕರಿ ಹರಿಯಲು ಬಿಡಲಾಯಿತು. ಅಗಸಿಯಲ್ಲಿ ಬೇವಿನ ತಪ್ಪಲ, ಕೊಬ್ಬರಿ ಬಟ್ಟಲ ಕಟ್ಟಿದ ಹಗ್ಗವನ್ನು ಕೆಂದ ಎತ್ತು ಮುನ್ನುಗ್ಗಿ ಮುಂಚೂಣಿಯಲ್ಲಿ ಇದ್ದಿದರಿಂದ ಮುಂಗಾರಿ ಬೆಳೆ ಪಸಲು ಉತ್ತಮವಾಗಿ ಬರಲಿವೆ ಎನ್ನುವ ನಂಬಿಕೆ ರೈತರದು.

ಶಾರದಾಳದಲ್ಲಿ ಕರಿ ಹರಿಯುವ ಸಂಭ್ರಮ:

ಸಂಜೆ ಊರ ಅಗಸಿಯ ಮುಂದೆ ಗೌಡಪ್ಪಗೌಡ ರಾಮನಗೌಡ ಪಾಟೀಲರವರ ಮನೆಯ ಕೆಂದು ಎತ್ತು ಮತ್ತು ವಿಠಲ ಬಸುನಾಯಕ ಮನೆಯಿಂದ ಬಿಳಿ ಎತ್ತುಗಳನ್ನು ಅಗಸಿಯಲ್ಲಿ ಓಡಿಸಿ ಕರಿ ಹರಿದರು. ಬಿಳಿ ಎತ್ತು ಮುಂದೆ ಓಡಿದ್ದರಿಂದ ಹಿಂಗಾರು ಬೆಳೆ ಉತ್ತಮವಾಗಿ ಬೆಳೆಯಲಿವೆ ಎಂದು ರೈತರು ಕಂಡುಕೊಂಡರು. ಉದಗಟ್ಟಿ ಗ್ರಾಮದಲ್ಲಿ ಬಿಳಿ ಎತ್ತು ಮುಂದೆ ಬಂದು ಹಿಂಗಾರಿ ಬೆಳೆ ಹುಲುಸಾಗಲಿದೆ ಎಂದು ಕಂಡುಕೊಂಡರು.