ಇಲ್ಲಿಗೆ ಸಮೀಪದ ಮೂರ್ನಾಡಿನ ಕಗ್ಗಾಲು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ವಲಯದ ವತಿಯಿಂದ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮೂರ್ನಾಡಿನ ಕಗ್ಗಾಲು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿರಾಜಪೇಟೆ ವಲಯದ ವತಿಯಿಂದ ಹೈನುಗಾರಿಕೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಪಶುವೈದ್ಯೆ ಡಾ. ಶಿಲ್ಪಅವರು, ಹೈನುಗಾರಿಕೆಯಲ್ಲಿ ಜಾನುವಾರುಗಳ ತಳಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಎಚ್.ಎಫ್. ಹಾಗೂ ಜರ್ಸಿ ಮುಂತಾದ ಮಿಶ್ರತಳಿಗಳ ಆಯ್ಕೆ ಸೂಕ್ತ. ಉತ್ತಮ ಹಾಲು ಉತ್ಪಾದನೆಗೆ ಜಾನುವಾರುಗಳಿಗೆ ಗುಣಮಟ್ಟದ ಹಸಿರು ಮೇವು ಮತ್ತು ಅಜೋಲಾ ಮುಂತಾದ ಜಲಸಸ್ಯಗಳ ಬಳಕೆ ಮಾಡಬೇಕು ಎಂದರು.
ಅಲ್ಲದೆ, ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಜಾನುವಾರುಗಳಿಗೆ ವಿಮೆ ಮಾಡಿಸುವುದು ಹಾಗೂ ಕರುಗಳ ಸಮರ್ಪಕ ಪಾಲನೆ ಅತ್ಯಂತ ಅಗತ್ಯ ಎಂದರು.ವಿರಾಜಪೇಟೆ ತಾಲೂಕಿನ ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಹೈನುಗಾರಿಕೆಗೆ ಆರ್ಥಿಕ ನೆರವು ದೊರೆಯುತ್ತಿದ್ದು, ರೈತ ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ವರಲಕ್ಷ್ಮಿ ಹೈನುಗಾರಿಕೆಯಿಂದ ದೊರೆಯುವ ಆರ್ಥಿಕ ಲಾಭದ ಕುರಿತು ವಿವರಿಸುತ್ತಾ, ಉಪ ಕಸುಬುಗಳಾದ ಆಡು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆಯ ಮಹತ್ವದ ಕುರಿತೂ ಬೆಳಕು ಚೆಲ್ಲಿದರು.ವಲಯದ ಸೇವಾಪ್ರತಿನಿಧಿ ದಿವ್ಯ ಇದ್ದರು. ಪ್ರಗತಿಪರ ಕೃಷಿಕರಾದ ಮಧು, ರಾಜಣ್ಣ, ವಿಪ್ಪನ್, ವರಲಕ್ಷ್ಮಿ, ಪಾರ್ವತಿ, ಕಾಯಪ್ಪ, ಮೇದಪ್ಪ ಹಾಗೂ ಅಪ್ಪಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ರೈತರು ಭಾಗವಹಿಸಿದ್ದರು.