ಸಾರಾಂಶ
ಮಾಗಡಿ: ಆಧುನಿಕ ಕೃಷಿಯಿಂದ ಹೇಗೆ ಲಾಭದಾಯಕ ಬೆಳೆಗಳನ್ನು ಬೆಳೆದು ಆರ್ಥಿಕ ಸುಧಾರಣೆ ಕಂಡುಕೊಳ್ಳುವ ಕುರಿತು ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳು ಗ್ರಾಮದಲ್ಲಿಯೇ ನೆಲೆಸಿ ರೈತರೊಂದಿಗೆ ಬೆರೆತು ಕೃಷಿಯಲ್ಲಿ ಪ್ರಗತಿ ಕಂಡುಕೊಳ್ಳುವ ಮಾರ್ಗಗಳನ್ನು ರೈತರಿಗೆ ತಿಳಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆ ಎಂದು ಡಾ. ಎ.ಎಸ್. ಪದ್ಮಜಾ ಹೇಳಿದರು.
ತಾಲೂಕಿನ ಹುಚ್ಚಹನುಮಗೌಡನಪಾಳ್ಯದಲ್ಲಿ ಬೆಂಗಳೂರು ಕೃಷಿ ವಿವಿ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಕೃಷಿ ಹಾಗೂ ಮೀನುಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಗ್ರಾಪಂ, ಡೇರಿ ಸಹಯೋಗದಲ್ಲಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ, ನೆಲೆದೊಡಲ ಚಿಗುರು ಬೆಳೆ ಕ್ಷೇತ್ರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ. ಜೆ.ಸರಳ ಕುಮಾರಿ ಮಾತನಾಡಿ, ರೈತರು ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿಗೆ ಅಗತ್ಯವಾಗಿ ಬೇಕಾಗಿರುವ ಸತ್ವಗಳನ್ನು ನೀಡಿದರೆ ಉತ್ತಮ ಫಸಲನ್ನು ನಿರೀಕ್ಷೆ ಮಾಡಬಹುದು. ಮನುಷ್ಯನ ಆರೋಗ್ಯ ಚೆನ್ನಾಗಿರಬೇಕು ಎಂದರೆ ಸಮಗ್ರ ಆಹಾರ ಸೇವನೆ ಮಾಡಬೇಕು. ಅದೇ ರೀತಿ ಬೆಳೆಗಳಿಗೆ ನೀಡುವ ಆಹಾರವು ಪೌಷ್ಠಿಕವಾಗಿರಬೇಕು ಎಂದರೆ ಅದಕ್ಕೆ 17 ಪೋಷಕಾಂಶಗಳಿರುವ ಸತ್ವವುಳ್ಳ ಮಣ್ಣು ಇರಬೇಕು. ಹಾಗಿದ್ದಲ್ಲಿ ಮಾತ್ರ ಗಿಡಗಳು ನಮಗೆ ಪೋಷಕಾಂಶವುಳ್ಳ ಹಣ್ಣು ನೀಡಲು ಸಾಧ್ಯ ಎಂದು ಹೇಳಿದರು.ಕಾಳಾರಿ ಕಾವಲ್ ಗ್ರಾಪಂ ಅಧ್ಯಕ್ಷ ವೆಂಕಟೇಶಮ್ಮ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಕೃಷಿಯಲ್ಲಿ ರೈತರಿಗೆ ಅಗತ್ಯ ಮಾಹಿತಿಯನ್ನು ಪ್ರತಿದಿನವೂ ನೀಡಿದ್ದಲ್ಲದೆ, ವಿದ್ಯಾರ್ಥಿಗಳೇ ಸೇರಿ 15 ಗುಂಟೆ ಜಾಗದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಿದರು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹುಚ್ಚಹನುಮೆಗೌಡ ಪಾಳ್ಯ ಗ್ರಾಮದಲ್ಲಿ ಮೂರು ತಿಂಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದು, ರೈತರಿಗೆ ಅಜ್ವಲ ತೊಟ್ಟಿ, ಪೌಷ್ಟಿಕಾಂಶ ಕೈತೋಟ, ಮಾದರಿ ಜೇನು ಸಾಕಾಣಿಕೆ, ಕಾಂಪೋಸ್ಟ್ ತೊಟ್ಟಿ, ಕೃಷಿ ಯಂತ್ರೋಪಕರಣಗಳ ಮಾಹಿತಿ ಜಲಾನಯನ ಮಾದರಿ ಬಗ್ಗೆ ಗಣ್ಯರಿಗೆ ವಿದ್ಯಾರ್ಥಿಗಳು ಪರಿಚಯ ಮಾಡಿಕೊಟ್ಟರು. ಹಾಗೂ ಕೃಷಿಗೆ ಸಂಬಂಧಿಸಿದಂತೆ ಹತ್ತಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ರೈತರಿಗೆ ಮಾಹಿತಿ ನೀಡಲಾಯಿತು, ಬೆಳೆ ಕ್ಷೇತ್ರೋತ್ಸವ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ವಿಶ್ರಾಂತ ವಿಸ್ತರಣಾ ನಿರ್ದೇಶಕ ಡಾ.ಎನ್.ಎಸ್. ಶಿವಲಿಂಗೇಗೌಡ, ಡಾ.ಬಸವರಾಜು ಬಿರಾದರ್, ಕೃಷಿ ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ. ವೈ.ಎನ್. ಶಿವಲಿಂಗಯ್ಯ, ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಮಂಜುಳಾ, ಡೇರಿ ಕಾರ್ಯದರ್ಶಿ ಶಿವರಾಮಯ್ಯ, ಪ್ರಗತಿಪರ ರೈತ ಕುಮಾರಸ್ವಾಮಿ, ಗ್ರಾಮ ಮುಖಂಡರಾದ ಪುಟ್ಟಸ್ವಾಮಿ, ಗಂಗಾಧರ್, ಗಂಗಣ್ಣ ದೊಡ್ಡಯ್ಯ, ಜಯರಾಮಯ್ಯ ಧನಂಜಯ ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಷನ್)ಮಾಗಡಿ ತಾಲೂಕಿನ ಹುಚ್ಚ ಹನುಮಗೌಡನ ಪಾಳ್ಯ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ,ನೆಲೆದೊಡಲ ಚಿಗುರು ಬೆಳೆ ಕ್ಷೇತ್ರ ಮತ್ತು ರೈತರ ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.