ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅನ್ನದಾತ ಸುಖೀಭವ ಎಂದು ಹೇಳುತ್ತಾರೆ. ಆದರೆ ಇಂದಿನ ಕೆಲವು ರೈತರು ಒತ್ತಡಕ್ಕೆ ಸಿಲುಕಿ ದುರಭ್ಯಾಸ, ದುಶ್ಚಟಗಳಿಗೆ ಸಿಲುಕಿ ತಮ್ಮ ಜೀವನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮೌಂಟ್ ಅಬು ರಾಜಾಸ್ಥಾನ ಗ್ರಾಮೀಣ ಸೇವಾ ವಿಭಾಗದ ಅಂತಾರಾಷ್ಟ್ರೀಯ ಅಧ್ಯಕ್ಷ ರಾಜಯೋಗಿ ಬ್ರಹ್ಮಕುಮಾರ ರಾಜುಭಾಯೀಜೀ ವಿಷಾದ ವ್ಯಕ್ತಪಡಿಸಿದರು.ನಗರದ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ದ ಶಾಶ್ವತ ಯೋಗಿಕ ಬೇಸಾಯದ ಬಗ್ಗೆ ರೈತರನ್ನು ಉದ್ದೇಶಿಸಿ ಮಾತನಾಡಿದರು. ರೈತರು ತಮ್ಮ ಜೀವನವನ್ನು ಸುಖಮಯ ಮಾಡಿಕೊಳ್ಳಲು ತಮ್ಮ ಪರಿವಾರಕ್ಕೆ ಬೇಕಾಗುವಷ್ಟು ವಿಷಮುಕ್ತ ಬೇಸಾಯ ಅಥವಾ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಣ್ಣಿನ ಸತ್ವ, ಬೀಜದ ಸತ್ವ ಬೆಳೆಯ ಸತ್ವವನ್ನು ಹೆಚ್ಚಿಸಲು, ಬಳಕೆದಾರರ ಆರೋಗ್ಯವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಉಪಯೋಗಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಪಂಪನಗೌಡ ರೈತರಿಗೆ ಕರೆ ನೀಡಿದರು. ರಾಜಯೋಗ ಶಿಕ್ಷಣ ತಜ್ಞ ಬ್ರಹ್ಮಕುಮಾರ ಪ್ರಾಣೇಶ್ ಜೀ ಮಾತನಾಡಿ, ಕೀಟನಾಶಕ ಸಿಂಪಡಣೆಯಿಂದ ಧವಸ ಧಾನ್ಯದಲ್ಲಿರುವ ಪೌಷ್ಟಿಕಾಂಶ ಮಣ್ಣಿನಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತದಂತಹ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದರು.ರಾಜಯೋಗ ರಿಟ್ರೀಟ್ ಸೆಂಟರ್‌ನ ಪ್ರಾಂಶುಪಾಲ ಬಿಕೆ ರಂಗನಾಥ ಶಾಸ್ತ್ರೀಜೀ ಮಾತನಾಡಿ, ಬೀಜದಂತೆ ವೃಕ್ಷ ಎಂದು ಹೇಳುತ್ತಾರೆ. ಹಾಗೇ ಬೀಜಕ್ಕೆ ಪರಮಾತ್ಮನ ನೆನಪಿನ ಕಿರಣಗಳನ್ನು ತುಂಬಿ ಬಿತ್ತನೆ ಮಾಡಿದ್ದೇ ಆದರೆ ಆರೋಗ್ಯಕರ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದರು.ರೈತ ಹೋರಾಟ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸಂಸ್ಥೆಯವರು ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಸಾವಯವ ಕೃಷಿ, ಶಾಶ್ವತ ಯೋಗಿಕ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವುದು ಶಾಘ್ಲನೀಯ ಕಾರ್ಯ ಎಂದರು.ಈ ಸಂದರ್ಭದಲ್ಲಿ ಜಿಲ್ಲೆಯ ಐದು ಸಾವಯವ ಕೃಷಿಕರನ್ನು ರಾಷ್ಟ್ರಾಧ್ಯಕ್ಷರು ಸನ್ಮಾನಿಸಿದರು. ಕಾರ್ಯಕ್ರಮದ ಆಯೋಜಕರಾದ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರೀಜೀ ಅವರು ಬೆಳೆಗಳ ಮೇಲೆ ಯೋಗ ಪ್ರಯೋಗ ಮಾಡುವ ವಿಧಿವಿಧಾನವನ್ನು ಸಾಮೂಹಿಕವಾಗಿ ಯೋಗ ಧ್ಯಾನದ ಮೂಲಕ ಅನುಭೂತಿ ಮಾಡಿಸಿದರು. ಜಿಲ್ಲಾ ಸಂಚಾಲಕಿ ಬಿಕೆ ಪ್ರಭಾಮಣೀಜೀ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್‌ನ ಬಿ.ಕೆ. ಆರಾಧ್ಯ, ರೈತ ಮಹಿಳೆ ಜಯಶ್ರೀ, ಸತೀಶ್, ಗೀತಾ, ಶ್ರೀನಿವಾಸ್, ವೀಣಾ, ರಮಾ, ಶಾಂಭವಿ, ಬಿಂದು, ಪುಷ್ಪ, ಇಂದುಮತಿ, ಭಾರತಿ, ನಿರ್ಮಲ, ಶಿವಕುಮಾರ್ ಮುಂತಾದವರು ಹಾಜರಿದ್ದರು.