ಸಾರಾಂಶ
ಅಧಿಕಾರಿಗಳಿಂದ ಕ್ರಮದ ಭರವಸೆ, ನೋಂದಣಿ ಖರೀದಿಗೆ ತೊಂದರೆ: ರೈತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹನುಮಸಾಗರತೊಗರಿ ಖರೀದಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆ ಸರಿಪಡಿಸಲು ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ವಿಎಸ್ಎಸ್) ಎದುರು ಪ್ರತಿಭಟನೆ ನಡೆಸಿದರು. ನೋಂದಣಿ ಸಮಸ್ಯೆಯಿಂದ ಆಕ್ರೋಶಗೊಂಡ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ಭೇಟಿ ನೀಡಿದ್ದ ನೋಡಲ್ ಅಧಿಕಾರಿ ಸುರೇಶ್ ತಂಗನೂರು ಅವರನ್ನು 30 ನಿಮಿಷಗಳ ಕಾಲ ಕೊಠಡಿಯಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ತೊಗರಿ ಖರೀದಿಗಾಗಿ ಹೆಸರು ನೋಂದಾಯಿಸುವಾಗ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲು 20ರಿಂದ 25 ನಿಮಿಷ ತೆಗೆದುಕೊಳ್ಳುತ್ತಿದೆ. ಇದರಿಂದ ರೈತರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಪಹಣಿಯಲ್ಲಿ ತೊಗರಿ ಬೆಳೆ ಇದ್ದರೂ, ಜಿಪಿಎಸ್ ತಾಂತ್ರಿಕ ದೋಷದಿಂದಾಗಿ ಅರ್ಜಿ ಸ್ವೀಕಾರವಾಗುತ್ತಿಲ್ಲ. ಜಿಪಿಎಸ್ ಮರು ಪರಿಶೀಲನೆಗೆ ಅವಕಾಶ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಒಂದು ಎಕರೆ ಒಳಗಿನ ಪಹಣಿಗಳು ನೋಂದಣಿಗೆ ತಕ್ಕಂತೆ ಪರಿಗಣಿಸಲಾಗುತ್ತಿಲ್ಲ. ಫ್ರೂಟ್ಸ್ ತಂತ್ರಾಂಶದಲ್ಲಿ ದೋಷ ಸಂದೇಶವನ್ನು ತೋರಿಸುತ್ತಿರುವುದರಿಂದ ತೊಗರಿ ಬೆಳೆ ಹೊಂದಿರುವ ರೈತರ ನೋಂದಣಿ ಪ್ರಕ್ರಿಯೆಯು ಅಡ್ಡಿಯಾಗಿದೆ. ಅನಗತ್ಯವಾಗಿ ಜಾತಿ, ಲಿಂಗ ಮತ್ತು ಜನ್ಮದಿನಾಂಕದ ಮಾಹಿತಿ ಕೇಳಲಾಗುತ್ತಿದೆ.ನೋಂದಣಿ ಕೇಂದ್ರದಲ್ಲಿ ಮೂರು ಕಂಪ್ಯೂಟರ್‌ಗಳಿದ್ದರೂ, ಒಂದರಲ್ಲಿ ಮಾತ್ರ ನೋಂದಣಿ ಮಾಡಲಾಗುತ್ತಿದೆ. ಆರಂಭದಲ್ಲಿಯೇ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಯಾವುದೇ ಹೆಚ್ಚುವರಿ ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು. ಸದ್ಯದ ವಿವರಗಳನ್ನು ಹೆಕ್ಟರ್ ಲೆಕ್ಕದಲ್ಲಿ ನೀಡಲಾಗುತ್ತಿದೆ. ಆದರೆ ರೈತರು ಕ್ವಿಂಟಲ್ ಲೆಕ್ಕದಲ್ಲಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆ ಈಡೇರಿಸಲು ಫೆ.3ರ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ಬೆಳೆ ತಕ್ಕ ಬೆಲೆಗೆ ಖರೀದಿಸಬೇಕು. ಸರಿಯಾದ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ, ಎಲ್ಲ ತೊಗರಿ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.ಪ್ರತಿಭಟನೆ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಜೀರಸಾಬ ಮೂಲಿಮನಿ, ಹನುಮಸಾಗರ ಹೋಬಳಿ ರೈತ ಸಂಘದ ಅಧ್ಯಕ್ಷ ಶರಣಪ್ಪ ಬಾಚಲಾಪುರ, ಹುಚ್ಚನೂರು, ಬಳೂಟಗಿ, ದೋಟಹಾಳ, ತಳುಗೇರಾ, ಹುಲಗೇರಾ, ಬಳೂಟಗಿ, ದೋಟಿಹಾಳ ರೈತ ಮುಖಂಡರಿದ್ದರು.--
02 ಎಚ್,ಎನ್,ಎಂ, 02ಹನುಮಸಾಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ನೋಡಲ್ ಅಧಿಕಾರಿಗಳಿಗೆ ನೊಂದಣಿ ತೊಂದರೆಯನ್ನು ಪರಿಹರಿಸಲು ಮನವಿ ಪತ್ರ ಸಲ್ಲಿಸಿದರು.